ಬೆಂಗಳೂರು: ರಾಜ್ಯದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಿನಲ್ಲಿ ನಿರ್ಮಿಸಬೇಕು ಎಂಬುದು ನನ್ನ ಮೊದಲಿನಿಂದಲೂ ಇರುವ ಇಚ್ಛೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ಗೃಹ ಕಚೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿ.ವೈ. ವಿಜಯೇಂದ್ರ ಅವರು ತಮಗೆ ತಿಳಿದ ರೀತಿಯಲ್ಲಿ ಎರಡನೇ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ್ದಾರೆ. ಆದರೆ ತುಮಕೂರಿನಲ್ಲಿ ವಿಮಾನ ನಿಲ್ದಾಣವಾಗಬೇಕು ಎಂದು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ರಾಜ್ಯದ ಸುಮಾರು 20 ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದ್ದು, ತಾಂತ್ರಿಕವಾಗಿಯೂ ಇದು ಅತ್ಯಂತ ಸೂಕ್ತ ಸ್ಥಳವಾಗಿದೆ” ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ತಾಂತ್ರಿಕ ಸಮಿತಿಯು ನೆಲಮಂಗಲದ ಕುಣಿಗಲ್ ರಸ್ತೆ ಹಾಗೂ ಬಿಡದಿ ಪ್ರದೇಶಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದೆ. ಡಿಜಿಸಿಎ (DGCA) ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಬಿಡದಿ ಟೌನ್ ಶಿಪ್ ವಿರೋಧಿಸಿ ನಡೆಯುತ್ತಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಭೂಸ್ವಾಧೀನದ ವಿಚಾರದಲ್ಲಿ ಯಾರ ಮೇಲೂ ಒತ್ತಾಯ ಮಾಡುವುದಿಲ್ಲ. ಈ ಯೋಜನೆಯನ್ನು ರಾಜಕೀಯ ದೃಷ್ಟಿಯಿಂದ ನೋಡದೆ ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಹಲವು ವರ್ಷಗಳಿಂದ ಬಾಕಿ ಇರುವ ಇ–ಸ್ವತ್ತು ವಿತರಣಾ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದರು.
ರಾಜ್ಯದಲ್ಲಿನ ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಲ್ಲಿ ಸುಮಾರು ₹600 ಕೋಟಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಾಗಿ ಪ್ರತಿ ಜಿಲ್ಲೆಗೆ ₹5 ಕೋಟಿಯಂತೆ ಒಟ್ಟು ₹329 ಕೋಟಿ ಅನುದಾನ ಲಭ್ಯವಿದೆ. ಬರ ಪರಿಸ್ಥಿತಿಯ ನಿಯಮಗಳನ್ನು ಸಡಿಲಗೊಳಿಸಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


