ಶಿವಮೊಗ್ಗದ ಹರಿಗೆಯ ಯುವಕನೊಬ್ಬನಿಗೆ(ಹೆಸರು ಗೌಪ್ಯ) ಬೆಂಗಳೂರಿನಲ್ಲಿರುವ ಸ್ನೇಹಿತರೊಬ್ಬರ ಮೂಲಕ ಒರಿಸಾ ಮೂಲದ ಸೂರ್ಯಂಶ್ ಅಲಿಯಾಸ್ ಕಾಲಿರಾತ್ ಎಂಬಾತನ ಪರಿಚಯವಾಗಿತ್ತು. ಆತನ ಐಬಿಎಂ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದ್ದ. ರಾಕೇಶ್ ಶಿವಮೊಗ್ಗದಲ್ಲಿರುವ ತನ್ನ ಸ್ನೇಹಿತರಿಗೆ ಈ ವಿಚಾರ ತಿಳಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವಕ ತನ್ನ ಹಲವು ಸ್ನೇಹಿತರ ರೆಸ್ಯೂಂಗಳನ್ನು ಸೂರ್ಯಂಶ್ ಗೆ ಕಳುಹಿಸಿದ್ದ. ಆದರೆ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಕೊಡಿಸಲು ತಲಾ 1.60 ಲಕ್ಷ ರೂ. ಹಣ ನೀಡಬೇಕು. ಇದಕ್ಕೆ ಪ್ರತಿಯಾಗಿ ಐಬಿಎಂ ಕಂಪನಿಯಿಂದ ಲ್ಯಾಪ್ ಟಾಪ್ ಒದಗಿಸಲಾಗುತ್ತದೆ ಎಂದು ಸೂರ್ಯಂಶ್ ನಂಬಿಸಿದ್ದ. ಅಂತೆಯೆ ಯುವಕ ವಿವಿಧ ಬ್ಯಾಂಕ್ ಖಾತೆಗಳಿಂದ ಸೂರ್ಯಂಶ್ ಸೂಚಿಸಿದ ಬ್ಯಾಂಕ್ ಖಾತೆಗೆ ಒಟ್ಟು 89 ಲಕ್ಷ ರೂ. ಹಣ ಕಳುಹಿಸಿದ್ದ.
ಈ ತನಕ ಸೂರ್ಯಂಶ್ ಕಡೆಯಿಂದ ಉದ್ಯೋಗವು ಸಿಕ್ಕಿಲ್ಲ, ಲ್ಯಾಪ್ ಟಾಪ್ ಕೂಡ ಕೊಡಿಸಿಲ್ಲ. ಕರೆ ಮಾಡಿದರೆ ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಆರೋಪಿಸಿ ಯುವಕ ತುಂಗಾ ನಗರ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


