ಮಡಿಕೇರಿ: ಹಳೇ ದ್ವೇಷದ ಹಿನ್ನೆಲೆ ಯುವಕನ ಮರ್ಮಾಂಗಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮದ ಪಾಲಿಬೆಟ್ಟ ರಸ್ತೆಯಲ್ಲಿ ನಡೆದಿದೆ.
ಕ್ರಿಸ್ಟಲ್ (28) ಹತ್ಯೆಯಾದ ದುರ್ದೈವಿ. ಗುರುವಾರ ರಾತ್ರಿ ಸಿದ್ದಾಪುರ ಗ್ರಾಮದ ಪಾಲಿಬೆಟ್ಟ ರಸ್ತೆಯಲ್ಲಿರುವ ಬಾರ್‌ವೊಂದರಲ್ಲಿ ಕ್ರಿಸ್ಟಲ್ ಸ್ನೇಹಿತರು ಹಾಗೂ ರಂಜಿತ್ ಸ್ನೇಹಿತರು ಇಬ್ಬರು ಒಂದೇ ಬಾರಿನಲ್ಲಿ ಮದ್ಯಪಾನ ಮಾಡುತ್ತಿದ್ದ ಸಂದರ್ಭ ರಂಜಿತ್ ಹಾಗೂ ಕ್ರಿಸ್ಟಲ್ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.
ಗಲಾಟೆಯನ್ನು ಗಮನಿಸಿದ ಬಾರ್ ಮ್ಯಾನೇಜರ್ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಸ್ಥಳಕ್ಕೆ ಆಗಮಿಸುವ ವೇಳೆ ಕ್ರಿಸ್ಟಲ್ ತಂಡ ಹಾಗೂ ರಂಜಿತ್ ತಂಡದ ಯುವಕರು ಬಾರ್ ಒಳಗೆ ನುಗ್ಗಿ ಇನ್ನಷ್ಟು ಗಲಾಟೆ ಮಾಡಿಕೊಂಡು ಬಾರ್‌ನ ಶೌಚಾಲಯದ ಬಾಗಿಲು ಮುರಿದಿದ್ದಾರೆ. ಬಳಿಕ ಪೊಲೀಸರು ಕ್ರಿಸ್ಟಲ್ ನ ಜೊತೆ ಇದ್ದ ಮೈಕೆಲ್ ಹಾಗೂ ಮತ್ತೊಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿದ್ದಾರೆ. ಆದರೆ ಗಲಾಟೆ ಮಾಡಿದ ರಂಜಿತ್ ಹಾಗೂ ಕ್ರಿಸ್ಟಲ್ ಇಬ್ಬರಿಗೂ ಸ್ಥಳದಲ್ಲೇ ಬುದ್ದಿವಾದ ಹೇಳಿ ಮನೆಗೆ ಹೋಗುವಂತೆ ತಿಳಿಸಿದ್ದರು.
ಶುಕ್ರವಾರ ಬೆಳಗ್ಗೆ ಬಾರ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದ ಕ್ರಿಸ್ಟಲ್ (28) ಮೃತದೇಹ ಪಾಲಿಬೆಟ್ಟ ರಸ್ತೆಯಲ್ಲಿ ಗೋಚರಿಸಿದೆ. ಯುವಕನ ಮರ್ಮಾಂಗಕ್ಕೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


