ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತೆಯ ಸಾಕು ನಾಯಿಯನ್ನು ಕಾಪಾಡಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಭೋಪಾಲ್ನಲ್ಲಿ ನಡೆದಿದೆ. ನಾಯಿ ಸುರಕ್ಷಿತವಾಗಿ ಈಜಿ ದಡ ಸೇರಿತು ಆದರೆ ಅದನ್ನು ರಕ್ಷಿಸಲು ಹೋಗಿದ್ದ ಯುವಕನ ಪ್ರಾಣಪಕ್ಷಿ ಹಾರಿಹೋಗಿತ್ತು.
ಯುವಕ ಸರಳ್ ನಿಗಮ್ ಎನ್ಐಟಿ ಭೋಪಾಲ್ ನಲ್ಲಿ ಬಿ.ಟೆಕ್ ಪಧವೀಧರನಾಗಿದ್ದಾನೆ. ಸರಳ್ ಇಬ್ಬರು ಸ್ನೇಹಿತರ ಜತೆ ಬೆಳಗ್ಗೆ 7.30ರ ಸುಮಾರಿಗೆ ಕೆರ್ವಾ ಅಣೆಕಟ್ಟು ಪ್ರದೇಶದ ಜಂಗಲ್ ಕ್ಯಾಂಪ್ ಗೆ ಹೋಗಿದ್ದರು. ಆ ಮೂವರ ಜತೆಗೆ ನಾಯಿಯೂ ಕೂಡ ಬಂದಿತ್ತು.
ಸುಮಾರು ಒಂದು ಗಂಟೆಯ ನಂತರ ಬೆಳಗ್ಗೆ 8:30 ರ ಸುಮಾರಿಗೆ, ಮೂವರು ಜಲಮೂಲದ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ನಾಯಿಯು ಆಕಸ್ಮಿಕವಾಗಿ ನೀರಿಗೆ ಬಿದ್ದಿತು. ನಾಯಿಯನ್ನು ರಕ್ಷಿಸಲು ಗೆಳೆಯರ ಗುಂಪು ಪರಸ್ಪರ ಕೈ ಹಿಡಿದು ನೀರಿಗೆ ಹಾರಿದ್ದಾರೆ.
ಹುಡುಗಿಯರು ನೀರಿನಿಂದ ಹೊರಬರುವಲ್ಲಿ ಯಶಸ್ವಿಯಾದರು ಆದರೆ ಬಲವಾದ ಪ್ರವಾಹದಿಂದ ಸರಳ್ ಆಳವಾದ ನೀರಿನಲ್ಲಿ ಮುಳುಗಿದ್ದಾನೆ. ನಂತರ ಯುವತಿಯರು ಓಡಿ ಹೋಗಿ ಸಹಾಯಕ್ಕಾಗಿ ಕೂಗಿದ್ದಾರೆ,ಕಿರುಚಾಟವನ್ನು ಕೇಳಿದ ಜಂಗಲ್ ಕ್ಯಾಂಪ್ ನ ವಾಚ್ಮನ್ ದಡಕ್ಕೆ ಓಡಿ ಬಂದು ರಾತಿಬಾದ್ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಸರಳ್ನ ಸುಳಿವು ಕಾಣಿಸಲಿಲ್ಲ, ಒಂದು ಗಂಟೆಯ ನಂತರ ಆತನ ಶವ ಪತ್ತೆಯಾಗಿದೆ. 10-15 ಅಡಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.


