ಬೆಳಗಾವಿ: ಕಾರವಾರ, ನಿಪ್ಪಾಣಿ, ಬೀದರ್, ಬಾಲ್ಕಿ ಸೇರಿದಂತೆ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಗಡಿ ವಿವಾದ ಹೋರಾಟ ಸುಪ್ರೀಂಕೋರ್ಟ್ ನಲ್ಲಿದೆ. ನಮ್ಮ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬರೀ ಹೇಳಿಕೆ ಕೊಡುವ ಸಿಎಂ ಅಲ್ಲ. ಮಹಾರಾಷ್ಟ್ರ ಏಕೀಕರಣ ಸಮಿತಿ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಹೇಳಿದ್ದಾರೆ.
ಕರ್ನಾಟಕದ ಗಡಿಯಲ್ಲಿ ಇರುವ ಮರಾಠಿ ಭಾಷಿಕರಿಗೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಜಾರಿ ಮಾಡಿದೆ. 865 ಹಳ್ಳಿಗಳಲ್ಲಿರುವ ಮರಾಠಿ ಭಾಷಿಕರಿಗೆ ಈ ಯೋಜನೆ ತಲುಪಿಸಬೇಕು. ಇದೇ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ಎಂಇಎಸ್ ಗೆ ಪೂರ್ಣ ಅಧಿಕಾರ ನೀಡಿದೆ. ಎಂಇಎಸ್ ನ ಶಿಫಾರಸ್ಸು ಮೇರೆಗೆ ಆರೋಗ್ಯ ವಿಮೆ ಲಾಭ ಮರಾಠಿ ಭಾಷಿಕರಿಗೆ ಸಿಗಲಿದೆ. ಎಷ್ಟೇ ಕೋಟಿ ಖರ್ಚಾದರೂ ಪರವಾಗಿಲ್ಲ. ಮಹಾರಾಷ್ಟ್ರ ಸೇರಬಯಸುವ 865 ಹಳ್ಳಿಗಳ ಜನರ ಮನೆ ಮನೆಗೂ ಎಂಇಎಸ್ ಮುಖಂಡರು ಯೋಜನೆ ತಲುಪಿಸಬೇಕು ಎಂದು ಕರೆ ಕೊಟ್ಟರು.
ಈ ಆರೋಗ್ಯ ವಿಮೆ ಯೋಜನೆ ಗಡಿ ಹೋರಾಟಕ್ಕೆ ಬಲ ತಂದು ಕೊಡಲಿದೆ. ಈ ವಿಮೆ ಮೂಲಕ ಕರ್ನಾಟಕ, ಮಹಾರಾಷ್ಟ್ರದಲ್ಲಿ ಇರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಗಡಿ ಭಾಗದ ಮರಾಠಿ ಭಾಷಿಕರ ಪರವಾಗಿ ಮಹಾರಾಷ್ಟ್ರ ಸರ್ಕಾರವಿದೆ ಎಂದರು.
ಮಹಾರಷ್ಟ್ರವು ಮೊದಲಿನಿಂದಲೂ ಗಡಿವಿವಾದವನ್ನು ಕೆಣಕುತ್ತ ಕನ್ನಡಿಗರ ತಾಳ್ಮೆ ಪರೀಕ್ಷಿಸುತ್ತಲೇ ಇದ್ದು, ಇದೀಗ ಸಂಸದ ಧೈರ್ಯಶೀಲ ಮಾನೆ ಹೇಳಿಕೆಯು ಕನ್ನಡಿಗರಿಗೆ ಮತ್ತಷ್ಟು ಆಕ್ರೋಶ ಹೆಚ್ಚುವಂತೆ ಮಾಡಿದೆ.


