ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಅಡುಗೆ ಅನಿಲ (LPG) ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಇದರಿಂದ ಆಕ್ರೋಶಗೊಂಡ ನೂರಾರು ಗ್ರಾಹಕರು ಗುರುವಾರ ಸ್ಥಳೀಯ ಗ್ಯಾಸ್ ಏಜೆನ್ಸಿ ಕಚೇರಿಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಸಿಲಿಂಡರ್ ಬುಕ್ ಮಾಡಿ ಹಲವು ದಿನಗಳಾದರೂ ಪೂರೈಕೆಯಾಗುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ. “ಸಿಲಿಂಡರ್ ಬುಕ್ ಮಾಡಿ ನಾಲ್ಕು ದಿನಗಳಾಗಿವೆ. ಏಜೆನ್ಸಿಯವರನ್ನು ವಿಚಾರಿಸಿದರೆ ಇನ್ನೂ ಒಂದು ವಾರ ಕಾಯಬೇಕು ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಮನೆಯಲ್ಲಿ ಅಡುಗೆ ಮಾಡಲು ಅನಿಲವಿಲ್ಲದೆ ಪರದಾಡುವಂತಾಗಿದೆ” ಎಂದು ಸ್ಥಳೀಯ ನಿವಾಸಿ ಅಂಬಿಕಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ನಿವಾಸಿ ಗೋಪಿ ಅವರು ಮಾತನಾಡಿ, “ಸಾಮಾನ್ಯ ಗ್ರಾಹಕರಿಗೆ ಸಿಗಬೇಕಾದ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಮಾತ್ರ ದಾಸ್ತಾನು ಇಲ್ಲ ಎಂಬ ಸಬೂಬು ಹೇಳಲಾಗುತ್ತಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಏಜೆನ್ಸಿ ಸ್ಪಷ್ಟನೆ:
ಈ ಕುರಿತು ಪ್ರತಿಕ್ರಿಯಿಸಿದ ಗ್ಯಾಸ್ ಏಜೆನ್ಸಿಯ ಆದರ್ಶ್, “ಸದ್ಯ ಪಟ್ಟಣದಲ್ಲಿ 2,500ಕ್ಕೂ ಹೆಚ್ಚು ಸಿಲಿಂಡರ್ ಬುಕಿಂಗ್ ಗಳು ಬಾಕಿ ಇವೆ. ಆದರೆ ನಮಗೆ ಕೇವಲ 342 ಸಿಲಿಂಡರ್ ಗಳು ಮಾತ್ರ ಪೂರೈಕೆಯಾಗಿವೆ. ದಾಸ್ತಾನು ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ. ಅಭಾವ ಉಂಟಾಗಬಹುದೆಂಬ ಆತಂಕದಲ್ಲಿ ಜನರು ಮುನ್ನೆಚ್ಚರಿಕೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬುಕಿಂಗ್ ಮಾಡುತ್ತಿದ್ದಾರೆ. ಲಭ್ಯವಿರುವ ಸಿಲಿಂಡರ್‌ಗಳನ್ನು ಜೇಷ್ಠತೆ (Priority) ಆಧಾರದ ಮೇಲೆ ವಿತರಿಸಲಾಗುತ್ತಿದೆ. ಶೀಘ್ರದಲ್ಲೇ ಪೂರೈಕೆ ಸಹಜ ಸ್ಥಿತಿಗೆ ಬರಲಿದೆ” ಎಂದು ಭರವಸೆ ನೀಡಿದ್ದಾರೆ.
ಗ್ಯಾಸ್ ಏಜೆನ್ಸಿ ಮುಂದೆ ‘ದಾಸ್ತಾನು ಇಲ್ಲ’ ಎಂಬ ಫಲಕಗಳನ್ನು ನೋಡಿ ಗ್ರಾಹಕರು ಅಸಹಾಯಕರಾಗಿದ್ದು, ಶೀಘ್ರವಾಗಿ ಪೂರೈಕೆ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


