ಕೊರಟಗೆರೆ: ತಾಲ್ಲೂಕಿನ ತುಂಬುಗಾನಹಳ್ಳಿ ಬಳಿ ಇರುವ 12ನೇ ಕೆ.ಎಸ್.ಆರ್.ಪಿ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್) ಘಟಕದ ಸಹಾಯಕ ಮೀಸಲು ಉಪನಿರೀಕ್ಷಕ (AR-SI) ಎನ್.ಜಿ. ಪವಾರ್ (54) ಅವರು ಗುರುವಾರ ಮಧ್ಯರಾತ್ರಿ ತೀವ್ರ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನವರಾದ ಪವಾರ್ ಅವರು ಕಳೆದ ನಾಲ್ಕು ವರ್ಷಗಳಿಂದ ಕೊರಟಗೆರೆಯ ಕೆಎಸ್‌ಆರ್‌ಪಿ ಬೆಟಾಲಿಯನ್‌ನಲ್ಲಿ ಎ.ಆರ್. ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಲ್ಲಿನ ವಸತಿ ಗೃಹದಲ್ಲಿ ವಾಸವಿದ್ದ ಅವರಿಗೆ ಗುರುವಾರ ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ.
ತಕ್ಷಣವೇ ಎಚ್ಚೆತ್ತ ಸಹೋದ್ಯೋಗಿ ಸಿಬ್ಬಂದಿ ಅವರನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಅವರು ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಪಾಸಣೆ ನಡೆಸಿದ ವೈದ್ಯರು ದೃಢಪಡಿಸಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕ ಹಾಗೂ ಸಹೋದ್ಯೋಗಿಗಳ ಅಂತಿಮ ದರ್ಶನಕ್ಕಾಗಿ ಬೆಟಾಲಿಯನ್ ಆವರಣದಲ್ಲಿ ಇರಿಸಲಾಗಿತ್ತು.
ಬೆಟಾಲಿಯನ್ ನ ಕಮಾಂಡೆಂಟ್ ಹಂಜಾ ಹುಸೇನ್ ಹಾಗೂ ಡೆಪ್ಯುಟಿ ಕಮಾಂಡೆಂಟ್ ನಿಸಾರ್ ಅಹಮದ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಂತಿಮ ನಮನ ಸಲ್ಲಿಸಿ, ಗೌರವ ವಂದನೆ ಅರ್ಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


