ಸಿರಾ: ದೇಶದಲ್ಲಿಯೇ ಮೊದಲ ಬಾರಿಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಲು ಕರ್ನಾಟಕ ಸರ್ಕಾರವು ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಯೋಜನೆ ಜಾರಿಗೆ ತಂದಿದೆ. ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಲು ಈ ಮನೆ ಮನೆ ಪೊಲೀಸ್ ಪರಿಕಲ್ಪನೆಯು ಅತಿ ಹೆಚ್ಚು ಪರಿಣಾಮಕಾರಿಯಾಗಿದೆ. ಪೊಲೀಸರೆಂದರೆ ಭಯ ಬೇಡ. ಅವರನ್ನು ಸಮುದಾಯದ ಭಾಗವಾಗಿ ಕಾಣಿ ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಶ್ರೀನಿವಾಸ್ ಡಿಜೆ ಹೇಳಿದರು.
ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣೆಯ ವತಿಯಿಂದ ಚಿಕ್ಕನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ನಡೆದ ಮನೆ ಮನೆ ಪೊಲೀಸ್ ಸಮೂಹ ಮುಖ್ಯಸ್ಥರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳ್ಳಂಬೆಳ್ಳ ಪಿಎಸ್ ಐ ಭೈರೇಗೌಡ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಸರಗಳ್ಳತನ, ಮನೆಗಳ್ಳತನ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದು ಇದರ ಬಗ್ಗೆ ಸಮೂಹಗಳ ಮುಖ್ಯಸ್ಥರು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಪೊಲೀಸರು ಮತ್ತು ನಾಗರಿಕ ಜಗತ್ತಿನ ನಡುವಿನ ಅಂತರವನ್ನು ಕಡಿಮೆ ಮಾಡಿ, ಅವರ ಮಧ್ಯೆ ಬಾಂಧವ್ಯವನ್ನು ಬೆಳೆಸಿ, ನಾಗರಿಕರು ಕಾನೂನನ್ನು ಕೈಗೆತ್ತಿಕೊಳ್ಳದೆ ಪೊಲೀಸರ ಜೊತೆ ಸಹಕರಿಸುವಂತೆ ಮಾಡುವುದಕ್ಕಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ನಿಜವಾಗಿಯೂ ಶ್ಲಾಘನೀಯ ಶ್ರೀನಿವಾಸ್ ಡಿಜೆ ತಿಳಿಸಿದರು.
ಎಎಸ್ ಐ ಹುಚ್ಚೇರಣ್ಣ ಪ್ರಾರ್ಥಿಸಿ, ಮುಖಿಪೇದೆ ಶಾಹಿದ್ ನಿರೂಪಿಸಿದರು. ಠಾಣಾ ಸಿಬ್ಬಂದಿ ಎಎಸ್ಐ ನರಸಿಂಹಮೂರ್ತಿ, ಎಸ್ಐ ಶ್ರೀನಿವಾಸ್ ಸೇರಿದಂತೆ ಅನೇಕ ಪ್ರಮುಖರು ಇದ್ದರು.
ದೇಶದಲ್ಲಿ ಇಂತಹ ಉಪಕ್ರಮವನ್ನು ಜಾರಿಗೆ ತರುತ್ತಿರುವುದು ಇದೇ ಮೊದಲು. ಬೇರೆ ಯಾವುದೇ ರಾಜ್ಯವೂ ಈ ರೀತಿಯ ಕಾರ್ಯಕ್ರಮವನ್ನು ಪರಿಚಯಿಸಿಲ್ಲ. ಇದು ರಾಷ್ಟ್ರವ್ಯಾಪಿ ಯಶಸ್ವಿ ಮಾದರಿಯಾಗಲಿದೆ. ನಿಮ್ಮ ನೆರೆಹೊರೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೆ ಅಥವಾ ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ ಅದರ ಮಾಹಿತಿಯನ್ನು ಪೊಲೀಸರ ಬಳಿ ಹಂಚಿಕೊಳ್ಳಬಹುದು. ಅಲ್ಲದೆ, ಡ್ರಗ್ಸ್ ಚಟುವಟಿಕೆ ಸೇರಿದಂತೆ ಎಲ್ಲ ಮಾಹಿತಿಯನ್ನು ಪೊಲೀಸರಿಗೆ ನೀಡಬಹುದಾಗಿದೆ.
| ಶ್ರೀನಿವಾಸ್ ಡಿ.ಜೆ., ಸಿಪಿಐ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




