ತುಮಕೂರು: ರೈತರು ಕೇವಲ ಜಮೀನು ಅಥವಾ ಭೂಮಿಯನ್ನು ಹೊಂದಿರುವುದಷ್ಟೇ ಪ್ರಮುಖವಲ್ಲ. ತಮ್ಮ ಜಮೀನಿನ ಬಗ್ಗೆ ಕಾನೂನು ಅರಿವು, ಹಕ್ಕುಗಳು ಹಾಗೂ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಯೋಜನೆಗಳ ದಾಖಲಾತಿಗಳ ಬಗ್ಗೆ ಸ್ಪಷ್ಟ ಜ್ಞಾನ ಹೊಂದಿರಬೇಕು. ತಮ್ಮ ಹಕ್ಕನ್ನು ತಾವೇ ಪಡೆದುಕೊಳ್ಳುವ ಸಾಮರ್ಥ್ಯ ಬಂದಾಗ ಮಾತ್ರ ಭೂ ಒಡೆತನಕ್ಕೆ ಸಾರ್ಥಕತೆ ಸಿಗುತ್ತದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ತಿಳಿಸಿದರು.
ಸಿರಾ ತಾಲ್ಲೂಕಿನ ಗುಮ್ಮನಹಳ್ಳಿಯ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ನಾಯಕತ್ವ ಶಿಬಿರದಲ್ಲಿ ‘ಭೂಮಿ ಮತ್ತು ಭೂ ಕಂದಾಯ ಕಾನೂನುಗಳು, ರೈತರ ಹಕ್ಕುಗಳು ಮತ್ತು ಪರಿಹಾರ’ ವಿಷಯದ ಕುರಿತು ಅವರು ಮಾತನಾಡಿದರು.
ಭೂಕಂದಾಯ ಇತಿಹಾಸವು ಕೇವಲ ತೆರಿಗೆ ಸಂಗ್ರಹದ ಕಥೆಯಲ್ಲ, ಅದು ಸಮಾಜದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಿಕಾಸದ ಪ್ರತಿಬಿಂಬವಾಗಿದೆ ಎಂದ ಲಿಂಗಪ್ಪ ಅವರು, ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಆಗಮನದಿಂದಾಗಿ ಕಂದಾಯ ಆಡಳಿತದಲ್ಲಿ ಭಾರಿ ಬದಲಾವಣೆಯಾಗಿದೆ ಎಂದರು.
“ಕರ್ನಾಟಕದಲ್ಲಿ ‘ಭೂಮಿ’ ಯೋಜನೆಯಂತಹ ಡಿಜಿಟಲೀಕರಣ ಉಪಕ್ರಮಗಳು ಭೂ ದಾಖಲೆಗಳ ನಿರ್ವಹಣೆಯಲ್ಲಿ ಕ್ರಾಂತಿ ಸೃಷ್ಟಿಸಿವೆ. ಇ-ಆಡಳಿತದ ವೇದಿಕೆಗಳು ಪಾರದರ್ಶಕತೆ ಹೆಚ್ಚಿಸಿ, ಭ್ರಷ್ಟಾಚಾರ ಕಡಿಮೆ ಮಾಡಿವೆ. ರೈತರಿಗೆ ಸುಲಭವಾಗಿ ದಾಖಲೆಗಳು ಸಿಗುವಂತಾಗಿದ್ದು, ಅವರ ಸಬಲೀಕರಣಕ್ಕೆ ಕಾರಣವಾಗಿದೆ. ಆದಾಗ್ಯೂ, ಭೂ ಅತಿಕ್ರಮಣ ಮತ್ತು ನಗರೀಕರಣದ ಸವಾಲುಗಳು ಇನ್ನೂ ಇವೆ,” ಎಂದು ಅವರು ವಿವರಿಸಿದರು. ಇದೇ ವೇಳೆ ಕಂದಾಯ ಇಲಾಖೆಯ ಲಾಗಾಯ್ತಿನಿಂದ ಸಮಕಾಲೀನದವರೆಗಿನ ವಿಷಯಗಳನ್ನು ಕ್ರೋಢೀಕರಿಸಿ ತಾವು ತಂದಿರುವ ಪುಸ್ತಕ ಇಲಾಖೆಗೆ ತಮ್ಮ ‘ಅಳಿಲು ಸೇವೆ’ ಎಂದು ವಿನಮ್ರವಾಗಿ ಸ್ಮರಿಸಿದರು.
ಒಂದು ವರ್ಷದೊಳಗೆ ‘ಇ-ಜಮಾಬಂದಿ’ ಪೂರ್ಣ:
ವಿಧಾನಪರಿಷತ್‌ನಲ್ಲಿ ಕಂದಾಯ ಸಚಿವರು ನೀಡಿದ ಭರವಸೆಯಂತೆ, ಗ್ರಾಮ ಮತ್ತು ತಾಲೂಕು ಮಟ್ಟದ ಭೂದಾಖಲೆಗಳನ್ನು ತಾಳೆ ಮಾಡಿ ಕ್ರಮಬದ್ಧಗೊಳಿಸುವ ‘ಇ-ಜಮಾಬಂದಿ’ ತಂತ್ರಾಂಶ ಪ್ರಕ್ರಿಯೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಜಮಾಬಂದಿ ಎಂಬುದು ವಾರ್ಷಿಕ ಭೂ ದಾಖಲೆಗಳ ಪರಿಶೀಲನೆಯ ಸರ್ಕಾರಿ ಪ್ರಕ್ರಿಯೆಯಾಗಿದ್ದು, ಇ-ಜಮಾಬಂದಿ ಮೂಲಕ ಆನ್‌ಲೈನ್‌ನಲ್ಲೇ ಹಕ್ಕುಗಳ ದಾಖಲೆಗೆ ಅಧಿಕೃತ ಧೃಢೀಕರಣ ಸಿಗಲಿದೆ. ಹರಿಯಾಣ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಇದನ್ನು ಯಶಸ್ವಿಯಾಗಿ ಜಾರಿಗೊಳಿಸಿವೆ ಎಂದು ಮಾಹಿತಿ ನೀಡಿದರು.
ಗ್ರಾಮ ಲೆಕ್ಕಿಗರು ನೀಡುವ ಆರ್.ಟಿ.ಸಿ. ನಕಲುಗಳಲ್ಲಿನ ವಿಸ್ತೀರ್ಣ ಮತ್ತು ಗ್ರಾಮದ ಆಕಾರಬಂದ್ ವಹಿಯಲ್ಲಿನ ವಿಸ್ತೀರ್ಣ ಪರಸ್ಪರ ತಾಳೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಲು ಮತ್ತು ಭೂಸ್ವಾಮ್ಯ ವಾರಸು ಹಕ್ಕು, ದಾಖಲೆ ತಿದ್ದುಪಡಿ ಮಾಡಲು ಈ ಜಮಾಬಂದಿ ಪ್ರಕ್ರಿಯೆ ಸಹಕಾರಿಯಾಗಿದೆ.
ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿ ದರೋಡೆಯಾಗುತ್ತಿದೆ ಎಂದು ಮಾಜಿ ಅಡ್ವಕೇಟ್ ಜನರಲ್ ಹಾಗೂ ಹಿರಿಯ ವಕೀಲರಾದ ಪ್ರೊ.ರವಿವರ್ಮಕುಮಾರ್ ತೀವ್ರ ಆತಂಕ ವ್ಯಕ್ತಪಡಿಸಿದರು. ಶಿಬಿರದಲ್ಲಿ ಆಶಯ ನುಡಿಗಳನ್ನಾಡಿದ ಅವರು, “ಅಭಿವೃದ್ಧಿ ಅಂದಕೂಡಲೇ ರೈತರನ್ನು ಒಕ್ಕಲೆಬ್ಬಿಸುವುದು ಎಂಬಂತಾಗಿದೆ. ರೈಲ್ವೆ, ಹೆದ್ದಾರಿ, ರಸ್ತೆ ಅಥವಾ ಕೈಗಾರಿಕೆಗಳಿಗೆ ಜಾಗ ಕೊಡುವ ವಿಚಾರ ಬಂದಾಗ ರೈತರನ್ನೇ ಏಕೆ ಗುರಿ ಮಾಡಬೇಕು? ಇದಕ್ಕೆ ಬೇರೆ ಪರಿಹಾರಗಳಿಲ್ಲವೇ? ರೈತರನ್ನು ಒಕ್ಕಲೆಬ್ಬಿಸಿ ಎಷ್ಟು ಜನರಿಗೆ ಉದ್ಯೋಗ ನೀಡಿದ್ದೀರಿ?” ಎಂದು ಪ್ರಶ್ನಿಸಿದರು.
ಇದುವರೆಗೆ ಕೈಗಾರಿಕಾ ಪ್ರದೇಶಗಳಿಗಾಗಿ ಎಷ್ಟು ರೈತರನ್ನು ಒಕ್ಕಲೆಬ್ಬಿಸಲಾಗಿದೆ? ಆ ಭೂಮಿ ಈಗ ಯಾರ ಒಡೆತನದಲ್ಲಿದೆ? ಭೂಮಿ ಕಳೆದುಕೊಂಡ ರೈತರ ಬದುಕೇನಾಗಿದೆ? ಆ ಅಮೂಲ್ಯ ಭೂಮಿಯನ್ನು ಯಾರಿಗೆ ನೀಡಲಾಗಿದೆ ಎಂಬುದರ ಕುರಿತು ಸರ್ಕಾರ ತಕ್ಷಣವೇ ಶ್ವೇತಪತ್ರ ಹೊರಡಿಸಬೇಕು. ಸಮಗ್ರ ಮಾಹಿತಿಯನ್ನು ರಾಜ್ಯದ ರೈತರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸುವವರೆಗೂ ಸರ್ಕಾರ ಯಾವುದೇ ಹೊಸ ಭೂಸ್ವಾಧೀನ ಪ್ರಕ್ರಿಯೆಗೆ ಕೈಹಾಕಬಾರದು. ಇದರ ಬಗ್ಗೆ ವಿವರವಾದ ಅಧ್ಯಯನ ನಡೆಸಿ ಸಮಾಜದ ಮುಂದಿಡಬೇಕು ಎಂದು ಅವರು ಒತ್ತಾಯಿಸಿದ್ರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಿರಾ ತಹಶೀಲ್ದಾರ್ ಅವರು, ತಾಲೂಕಿನಲ್ಲಿ ಈಗಾಗಲೇ 8 ಸಾವಿರಕ್ಕೂ ಹೆಚ್ಚು ಜನರಿಗೆ ಸಂಬಂಧಿಸಿದ ಖಾತೆ, ಸಾಗುವಳಿ ಚೀಟಿ, ಪೋತಿ ಖಾತೆ ಸೇರಿದಂತೆ ಭೂ ಒಡೆತನದ ಹಲವು ಕಂದಾಯ ಸಮಸ್ಯೆಗಳನ್ನು ಪರಿಹರಿಸಿ ರೈತರಿಗೆ ನೆರವು ನೀಡಲಾಗಿದೆ ಎಂದು ತಿಳಿಸಿದರು.
ಈ ಉನ್ನತ ಮಟ್ಟದ ಶಿಬಿರದಲ್ಲಿ ಪ್ರಮುಖ ರೈತ ಹೋರಾಟಗಾರರಾದ ಅನುಸೂಯಮ್ಮ, ದೊ.ರಂಗನಾಥಗೌಡ, ಪೂಜಾರಪ್ಪ, ಕೆ.ಟಿ.ಗಂಗಾಧರ್, ರಾಮಕೃಷ್ಣ ನೀರಕಲ್ಲು ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




