ತುರುವೇಕೆರೆ: ಬ್ಯಾಂಕ್ ಅಧಿಕಾರಿಗಳಿಂದ ನ್ಯಾಯ ಸಿಗದ ಸಂದರ್ಭದಲ್ಲಿ ಹಸಿರು ಶಾಲು ನಮಗೆ ನ್ಯಾಯ ದೊರಕಿಸಿಕೊಡುವ ಅಸ್ತ್ರವಾಗಿದೆ. ಹಾಗಾಗಿ ರೈತರು ಯಾವುದೇ ಸಂದರ್ಭದಲ್ಲೂ ಶಾಲನ್ನು ತೆಗೆಯಬೇಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಂಡ್ಯ ಜಿಲ್ಲಾಧ್ಯಕ್ಷ ಇಂದುವಾಳು ಚಂದ್ರಶೇಖರ್ ರೈತ ಸಂಘದ ಸದಸ್ಯರುಗಳಿಗೆ ಕಿವಿಮಾತು ಹೇಳಿದರು.
ಅವರು ತಾಲೂಕಿನ ಮಾಯಸಂದ್ರ ಹೋಬಳಿ ಕಣಕೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾ. ಅಧ್ಯಕ್ಷ ಕಣಕೂರು ಚಂದ್ರಶೇಖರ್ ಇವರ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ಉದ್ಘಾಟನಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀವುಗಳು ಹಸಿರು ಶಾಲನ್ನು ಹೆಗಲಿಗೆ ಹಾಕಿದ್ದೀರಿ. ಇದನ್ನು ಯಾವುದೇ ಪರಿಸ್ಥಿತಿಯಲ್ಲೂ ತೆಗೆಯಬೇಡಿ. ಹೊರದೇಶದಲ್ಲಿಯೂ ಸಹ ನನ್ನನ್ನು ಹಸಿರು ಶಾಲಿನಿಂದ ಗುರುತಿಸಿದರೆಂದರೆ ಇದು ಹಸಿರು ಶಾಲಿನ ಮಹತ್ವವೇ ಸರಿ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಬನ್ನೂರು ನಾರಾಯಣ್, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೈಸೂರು ಜಿಲ್ಲೆ ಇವರು ನೆರವೇರಿಸಿ, ಸರ್ಕಾರಕ್ಕೆ ಕೆಲವು ಹಕ್ಕೊತ್ತಾಯ ಮಂಡಿಸಿದರು.
ತಾಲ್ಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾಧ್ಯಕ್ಷ ಯೋಗೇಶ್ ಗೌಡ, ಗೌರವಾಧ್ಯಕ್ಷ ಮಹದೇವಪ್ಪ, ಮದ್ದೂರು ತಾಲ್ಲೂಕು ಅಧ್ಯಕ್ಷ ಪ್ರಭುಲಿಂಗರವರು, ಮಂಡ್ಯದ ಸೋ.ಚಿ.ಪ್ರಕಾಶ್, ನಾಗಮಂಗಲ ತಾಲ್ಲೂಕು ಅಧ್ಯಕ್ಷ ಸುರೇಶ್, ಮಹಿಳಾ ಅಧ್ಯಕ್ಷೆ ಸುಧಾಮಣಿ, ಸಂಘದ ಧನಂಜಯ, ವಿಜಯನರಸಿಂಹಶೆಟ್ಟಿ, ಶಿವಸ್ವಾಮಿ, ವಿನೋದ್, ಸುರೇಶ್, ಅರುಣ್ ಕುಮಾರ್, ಮಾಜಿ ಪ್ರಧಾನರು ಟಿ. ಜವರಯ್ಯ, ಕಣಕೂರು, ಹುಲಿಕೆರೆ, ಗೋಣಿ ತುಮಕೂರು, ವರಾಹಸಂದ್ರ, ದುಮ್ಮನಹಳ್ಳಿ ಗ್ರಾಮ ಘಟಕದ ಸದಸ್ಯರುಗಳು ಮತ್ತು ತಾಲ್ಲೂಕಿನ ವಿವಿಧ ಭಾಗಗಳ ರೈತ ಸಂಘದ ಸದಸ್ಯರುಗಳು ಮತ್ತು ಗ್ರಾಮದ ಮುಖಂಡರುಗಳು ಹಾಗೂ ಗ್ರಾಮಸ್ಥರುಗಳು ಇದ್ದರು.
ಪ್ರೊ. ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ರೈತ ಚಳವಳಿ ಪ್ರಾರಂಭವಾಯಿತು. ಅಂದು ಗುಂಡೂರಾವ್ ಸರ್ಕಾರವಿದ್ದ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಸೊಸೈಟಿಗಳಲ್ಲಿ 500 ರಿಂದ 1000 ರೂ. ಸಾಲ ಪಡೆಯುತ್ತಿದ್ದ ರೈತರು ಸಾಲ ಕಟ್ಟಲು ಸಾಧ್ಯವಾಗದ ಸಮಯದಲ್ಲಿ ಮನೆಯನ್ನು ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡುತ್ತಿದ್ದರು. ಈಗ ಅದಕ್ಕೆ ರೈತಸಂಘ ಕಡಿವಾಣ ಹಾಕಿದೆ. ಗ್ರಾಮಗಳ ಪ್ರವೇಶ ದ್ವಾರದಲ್ಲಿಯೇ ರೈತಸಂಘದ ಬೋರ್ಡ್ಗಳನ್ನು ಹಾಕುತ್ತಿರುವುದರಿಂದ ಬ್ಯಾಂಕ್ ಹಾಗೂ ಇತರೆ ಅಧಿಕಾರಿಗಳು, ಗ್ರಾಮದೊಳಕ್ಕೆ ಬರಲು ಹಿಂದು ಮುಂದು ಯೋಚಿಸುವಂತಾಗಿದೆ. ರೈತ ಸಂಕಷ್ಟಕ್ಕೊಳಗಾದಾಗ ಅಂತಹ ಅಮಾಯಕರ ಬೆನ್ನೆಲುಬಾಗಿ ನಮ್ಮ ಸಂಘದ ಸದಸ್ಯರು ನಿಂತು ನ್ಯಾಯ ದೊರಕಿಸಿಕೊಡೋಣ.
— ಇಂದುವಾಳು ಚಂದ್ರಶೇಖರ್, ಮಂಡ್ಯ ಜಿಲ್ಲಾಧ್ಯಕ್ಷರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


