ಗುಬ್ಬಿ: ಇತ್ತೀಚಿನ ದಿನದಲ್ಲಿ ಆಹಾರ ಕ್ರಮ ಕಲುಷಿತವಾಗುತ್ತಿದ್ದು, ಪ್ರತಿಯೊಬ್ಬರು ರಾಸಾಯನಿಕಯುಕ್ತ ಆಹಾರ ಸೇವನೆ ಮಾಡುತ್ತಾ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನುಪಮ ಡಿ. ತಿಳಿಸಿದರು.
ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ಇವರುಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಎಚ್ ಪಿವಿ ಲಸಿಕೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಆರೋಗ್ಯ ರಕ್ಷಣೆಗೆ ಧೈರ್ಯ ತೋರಿಸಬೇಕಾಗಿದೆ. ಸರ್ಕಾರವು ಹಲವಾರು ವ್ಯಾಕ್ಸಿನ್ ಗಳನ್ನು ಜಾರಿಗೆ ತಂದಿದ್ದರೂ ಅವುಗಳನ್ನು ಹಾಕಿಸಿಕೊಳ್ಳದೆ ಕಾಯಿಲೆಗೆ ಬಲಿಯಾಗುತ್ತಿರುವುದು ಹೆಚ್ಚು ಕಂಡುಬರುತ್ತದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪೂರ್ಣಿಮಾ ಕೆ. ಯಾದವ್ ಮಾತನಾಡಿ, ತಾಯಿಯಾಗಿ ಮಕ್ಕಳನ್ನು ರಕ್ಷಣೆ ಮಾಡುವುದು ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ರಕ್ಷಣೆಗಾಗಿ ಎಚ್ ಪಿವಿ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು. ಸರ್ಕಾರಕ್ಕೆ ಜವಾಬ್ದಾರಿ ಇರುವುದರಿಂದ ಆರೋಗ್ಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ಹೊಸ ಹೊಸ ಲಸಿಕೆಗಳನ್ನು ಜಾರಿಗೆ ತರುತ್ತಿದೆ. ಅವುಗಳನ್ನು ನಾವುಗಳು ತಪ್ಪದೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಅಧಿಕಾರಿ ಜಿ.ವಿಜಯ್ ಕುಮಾರ್ ಮಾತನಾಡಿ, ಯುವತಿಯರ ಭವಿಷ್ಯದ ಆರೋಗ್ಯವನ್ನು ರಕ್ಷಿಸಲು ಎಚ್ಪಿವಿ ಲಸಿಕೆ ಸಹಕಾರಿ. ಲಸಿಕೆ ಹಾಕಿಸಿಕೊಳ್ಳುವುದರಿಂದ ಕ್ಯಾನ್ಸರ್ ಚಿಕಿತ್ಸೆಗೆ ಬೇಕಾಗುವ ಹೆಚ್ಚಿನ ವೆಚ್ಚ ಮತ್ತು ದೈಹಿಕ-ಮಾನಸಿಕ ತೊಂದರೆಗಳನ್ನು ತಪ್ಪಿಸಲು ನೆರವಾಗುತ್ತದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಲಸಿಕೆಯನ್ನು 9 – 14 ವರ್ಷದ ಬಾಲಕಿಯರಿಗೆ ನೀಡುವುದು ಅತ್ಯಂತ ಪರಿಣಾಮಕಾರಿಯಾಗಿದೆ. 15 ವರ್ಷ ಮೇಲ್ಪಟ್ಟವರೂ ವೈದ್ಯರ ಸಲಹೆಯಂತೆ ಲಸಿಕೆ ಪಡೆಯಬಹುದು. ಲಸಿಕೆ ಪಡೆದ ನಂತರವೂ ವೈದ್ಯರ ಸಲಹೆಯಂತೆ ನಿಯಮಿತ ಗರ್ಭಕಂಠ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದರು.
ಸಿವಿಲ್ ನ್ಯಾಯಾಧೀಶರಾದ ಎಸ್.ಪಿ.ಕಿರಣ್, ಅಧಿಕ ಸಿವಿಲ್ ನ್ಯಾಯಾಧೀಶರಾದ ಎಚ್.ವಿ.ಸವಿತಾರಾಣಿ, ಸರ್ಕಾರಿ ಅಭಿಯೋಜಕರಾದ ಕೆ.ಶೋಭಾ, ಕುಮಾರಿ ಅಕ್ಷತಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಪಿ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ನಟರಾಜು, ವೈದ್ಯರಾದ ಡಾ. ಕೇಶವ್ ರಾಜ್, ಡಾ.ಪ್ರಭಾ, ಡಾ. ಸುದರ್ಶನ್, ಜಗದೀಶ್, ಮಧು, ಇನ್ನರ್ ವ್ಹೀಲ್ ಕ್ಲಬ್ ಪದಾಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ, ಮಕ್ಕಳು, ಪೋಷಕರು ಮತ್ತಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


