ತುಮಕೂರು: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಆರೋಗ್ಯ ಇಲಾಖೆಯ ಹೆಲ್ತ್ ಇನ್ಸ್ಪೆಕ್ಟರ್ ಒಬ್ಬರು ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಪಾವಗಡ ತಾಲ್ಲೂಕಿನಲ್ಲಿ ವರದಿಯಾಗಿದೆ.
ಪಾವಗಡ ತಾಲ್ಲೂಕಿನ ಲಿಂಗದಹಳ್ಳಿ ಆರೋಗ್ಯ ಇಲಾಖೆಯಲ್ಲಿ ಹೆಲ್ತ್ ಇನ್ಸ್’ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೆವಳೂರು ಗ್ರಾಮದ ಶಿವಮೂರ್ತಿ (48) ಅವರೇ ಮೃತಪಟ್ಟ ದುರ್ದೈವಿ. ಜೂನ್ 27 ರಂದು ತಮ್ಮ ಕಾರನ್ನು ಬಾಡಿಗೆಗೆ ತಗೆದುಕೊಂಡು ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಶಿವಮೂರ್ತಿ ಅವರು ಮರಳಿ ಮನೆಗೆ ಬಂದಿರಲಿಲ್ಲ. ಈ ಸಂಬಂಧ ಕುಟುಂಬಸ್ಥರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ರಕ್ತಸಿಕ್ತ ಕಾರು, ಸುಟ್ಟ ಸ್ಥಿತಿಯಲ್ಲಿ ಶವ!
ನಿನ್ನೆಯಷ್ಟೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಸಮೀಪದ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಶಿವಮೂರ್ತಿ ಅವರ ಕಾರು ಪತ್ತೆಯಾಗಿತ್ತು. ಕಾರಿನೊಳಗೆ ರಕ್ತದ ಕಲೆಗಳು ಕಂಡುಬಂದಿದ್ದರಿಂದ ತೀವ್ರ ಆತಂಕ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಚಿತ್ರದುರ್ಗ ಜಿಲ್ಲೆಯ ಇಂಗಳದಾಳ ಲಂಬಾಣಿ ತಾಂಡಾ ಸಮೀಪ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಮೃತದೇಹದ ಸೊಂಟದಲ್ಲಿದ್ದ ಬೆಲ್ಟ್ ಆಧಾರದ ಮೇಲೆ ಇದು ನಾಪತ್ತೆಯಾಗಿದ್ದ ಶಿವಮೂರ್ತಿ ಅವರದ್ದೇ ಶವ ಇರಬಹುದು ಎಂದು ಶಂಕಿಸಲಾಗಿದೆ.
ಕೊಲೆ ಮಾಡಿ ಸುಟ್ಟಿರುವ ಶಂಕೆ:
ದುಷ್ಕರ್ಮಿಗಳು ಶಿವಮೂರ್ತಿ ಅವರನ್ನು ಬೇರೆ ಎಲ್ಲೋ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಇಂಗಳದಾಳ ತಾಂಡಾ ಸಮೀಪ ತಂದು ಅರೆಬರೆ ಸುಟ್ಟು ಹಾಕಿದ್ದಾರೆ ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ.
ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಂಡಿದ್ದು, ಮೃತರ ಪೋಷಕರು ಮತ್ತು ಕುಟುಂಬಸ್ಥರು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ಹಂತಕರನ್ನು ಶೀಘ್ರವಾಗಿ ಬಂಧಿಸಬೇಕೆಂದು ಪೊಲೀಸರನ್ನು ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯ ಬಳಿಕವಷ್ಟೇ ಸಾವಿನ ನಿಖರ ಕಾರಣ ಏನೆಂಬುದು ಅಧಿಕೃತವಾಗಿ ಹೊರಬರಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


