ಪಾವಗಡ: ವಿಶೇಷಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ಸದಾ ಸಿದ್ಧರಿದ್ದಾರೆ ಎಂದು ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಶಾಸಕ ಎಚ್.ವಿ. ವೆಂಕಟೇಶ್ ತಿಳಿಸಿದರು.
ಅವರು ಪುರಸಭೆ ಕಚೇರಿ ಹಾಗೂ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ಪ್ರತ್ಯೇಕ ಸವಲತ್ತು ವಿತರಣಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ನಗರೋತ್ಥಾನ ಹಂತ–4ರ ಶೇ. 5ರಷ್ಟು ಮೀಸಲು ಅನುದಾನದಡಿ ಅರ್ಹ ವಿಕಲಚೇತನ ಫಲಾನುಭವಿಗಳಿಗೆ ವಿಶೇಷ ಮೋಟಾರ್ ಸೈಕಲ್, ಟ್ರೈ ಸೈಕಲ್, ವ್ಹೀಲ್ ಚೇರ್, ಎಲ್ಬೋ ಕ್ರಚ್, ದೃಷ್ಟಿಹೀನರಿಗೆ ಸ್ಮಾರ್ಟ್ ಕೇನ್, ಶ್ರವಣದೋಷವುಳ್ಳವರಿಗೆ ಹಿಯರಿಂಗ್ ಏಡ್, ಬುದ್ಧಿಮಾಂದ್ಯರಿಗೆ ಎಂ.ಆರ್. ಕಿಟ್ ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಟೈಲರಿಂಗ್ ಮೆಷಿನ್ಗಳನ್ನು ಮತ್ತು ವಿದ್ಯಾವಂತ ವಿಕಲಚೇತನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಕಂಪ್ಯೂಟರ್, ಲ್ಯಾಪ್ಟಾಪ್, ಡ್ರೈಸಿ ಪ್ಲೇಯರ್, ವಾಟರ್ ಬೆಡ್ ಹಾಗೂ ಬ್ಯಾಟರಿ ಚಾಲಿತ ವ್ಹೀಲ್ಚೇರ್ಗಳನ್ನು ವಿತರಿಸಲಾಗಿದೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಸೇರಿದಂತೆ ವ್ಯಾಪಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಪ್ರತಿ ವಾರ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ಆದರೆ, ಜನರ ಕೆಲಸಗಳನ್ನು ಸರಿಯಾಗಿ ಮಾಡದ, ನಿರ್ಲಕ್ಷ್ಯ ವಹಿಸುವ ಕೆಲವು ಪುರಸಭಾ ಸದಸ್ಯರಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ ಎಂದು ತಿಳಿಸಿದರು.
ತಹಶೀಲ್ದಾರ್ ರವಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಧುಸೂದನ್, ಪುರಸಭೆ ಮುಖ್ಯ ಅಧಿಕಾರಿ ಜಾಫರ್ ಷರೀಫ್, ಪುರಸಭೆಯ ಮಾಜಿ ಅಧ್ಯಕ್ಷ ಸುದೇಶ್ ಬಾಬು, ಪಿ.ಎಚ್. ರಾಜೇಶ್, ಶಂಕರರೆಡ್ಡಿ, ರಾಮಾಂಜಿನಪ್ಪ, ವೇಲುರಾಜ್, ಮಾಜಿ ಸದಸ್ಯರಾದ ಮೂಲಿನ್ ತಾಜ್, ರವಿ, ಮೊಹಮ್ಮದ್ ಇಮ್ರಾನ್, ಸಿ.ಎನ್. ರವಿಕುಮಾರ್, ವಿಜಯಕುಮಾರ್, ಗುತ್ತಿಗೆದಾರ ಆರ್.ಎ. ಹನುಮಂತರಾಯಪ್ಪ, ಪ್ರಮೋದ್ ಕುಮಾರ್, ಗಂಗಾಧರ್, ಶೇಷಗಿರಿ, ಎಂಆರ್ಡಬ್ಲ್ಯೂ ಮೈಲಾರಪ್ಪ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ವಿಆರ್ ಡಬ್ಲ್ಯೂ ವಿಶೇಷ ಚೇತನರು ಹಲವು ಪ್ರಮುಖರು ಉಪಸ್ಥಿತರಿದ್ದರು.
ಸರ್ಕಾರದ ನಿಯಮದಂತೆ ಎಲ್ಲಾ ಇಲಾಖೆಗಳ ಅನುದಾನದಲ್ಲಿ ಶೇ. 5 ರಷ್ಟನ್ನು ವಿಕಲಚೇತನರಿಗಾಗಿ ಕಾಯ್ದಿರಿಸಲಾಗಿದೆ. ಕಳೆದ ವಾರದ ಜನಸಂಪರ್ಕ ಸಭೆಯಲ್ಲಿ ವಿಕಲಚೇತನರು ನೀಡಿದ ಮನವಿ ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ನನ್ನ ವೈಯಕ್ತಿಕ ಹಾಗೂ ತಾ.ಪಂ. ನಿಧಿಯಡಿ ವಿಕಲಚೇತನರಿಗೆ ಎಲೆಕ್ಟ್ರಿಕಲ್ ಸ್ಕೂಟಿಗಳನ್ನು ನೀಡಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ.
— ಎಚ್.ವಿ.ವೆಂಕಟೇಶ್, ಶಾಸಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


