ಬರಗೂರು: ಬುಡಕಟ್ಟಿಗೆ ಸೇರಿರುವ ಕಾಡುಗೊಲ್ಲರು ತಮ್ಮ ಕುಲದಲ್ಲಿ ಜನಿಸಿ ಬಹುದೊಡ್ಡ ಜನಪದ ಬದುಕನ್ನು ಬದುಕಿ, ಜೀವಪರವಾಗಿದ್ದ ಸಾಂಸ್ಕೃತಿಕ ವೀರಗಾರರನ್ನು ಕುಲದೈವಗಳೆಂದು ಪೂಜಿಸಿಕೊಂಡು ಬಂದಿದ್ದಾರೆ. ಶೀಲ ಮತ್ತು ಶೌಚಕ್ಕಾಗಿ ನಿಷ್ಠೆಯಿಂದ ಜನಪದ ದೈವಗಳ ಸಾಹಸದ ಬಗ್ಗೆ ಪದಗಳನ್ನು ಕಟ್ಟಿಕೊಂಡು, ಕಥನ ಕಾವ್ಯಗಳನ್ನು ಹಾಡುತ್ತಾ ಬದುಕಿನ ಬಂಡಿ ಎಳೆದ ಕಾಡುಗೊಲ್ಲರು ದೈವಾರಾಧನೆಯ ಜೊತೆಗೆ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಬೇಕು ಎಂದು ಸೂಪರಿಂಟೆಂಡೆಂಟ್ ಎಂಜಿನಿಯರ್ ತಿಮ್ಮರಾಯಪ್ಪ ಹೇಳಿದರು.
ತಾಲೂಕಿನ ಬರಗೂರು ಸಿದ್ದನಕುಂಟೆ ಸಿದ್ದೇಶ್ವರಸ್ವಾಮಿ ದೇವಾಲಯದಲ್ಲಿ ಗುರುವಾರ ನಡೆದ ವಿಶೇಷ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳ್ಳಿ ಮುಳ್ಳಿನ ಬೇಲಿಯ ಒಳಗೆ ಊರಿನಿಂದ ದೂರದಲ್ಲಿ ಹಟ್ಟಿ ಕಟ್ಟಿಕೊಂಡು ಪ್ರತ್ಯೇಕವಾಗಿ ರೀತಿ ರಿವಾಜುಗಳನ್ನು ರೂಢಿಸಿಕೊಂಡು ಕಟ್ಟಿಮನೆ, ಗುಡಿಕಟ್ಟುಗಳಿಂದ ನ್ಯಾಯಾಲಯದಂತೆ ಮೌಖಿಕ ಪರಂಪರೆಯಲ್ಲಿ ಬದುಕನ್ನು ರೂಢಿಸಿಕೊಂಡಿದ್ದರು. ಜನಪದ ವಿದ್ವಾಂಸರ ಸಂಶೋಧನೆಯಂತೆ ಕಾಡುಗೊಲ್ಲರ ಹಟ್ಟಿಗಳು ಜನಪದ ಕಥನಕಾವ್ಯಗಳ ಕಣಜಗಳಿದ್ದಂತೆ ಎಂದು ದಾಖಲಿಸಿದ್ದಾರೆ ಎಂದರು.
ದೇವಾಲಯಗಳು ಕೇವಲ ದೇವರ ಮೇಲಿನ ಆರಾಧನೆಗೆ ಸೀಮಿತವಾಗದೆ ಸಾಂಸ್ಕೃತಿಕ, ಜಾಗೃತಿಯ ಕೇಂದ್ರಗಳಾಗಬೇಕು. ಕಾಡುಗೊಲ್ಲರು ದೈವಾರಾಧನೆಯ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಮಹಿಳೆಯರ ಮೇಲಿನ ಅಸಂಪ್ರದಾಯಿಕ ಪದ್ಧತಿಗಳನ್ನು ಕೈಬಿಟ್ಟು, ಎಲ್ಲಾ ಸಮುದಾಯಗಳ ಜೊತೆಗೆ ಸೌಹಾರ್ದತೆಯಿಂದ ಬದುಕಬೇಕು.
— ತಿಮ್ಮರಾಯಪ್ಪ, ಸೂಪರಿಂಟೆಂಡಿಂಗ್ ಎಂಜಿನಿಯರ್, ಲೋಕೋಪಯೋಗಿ ಇಲಾಖೆ.
ಪಶುಪಾಲಕ ಜನಪದ ದೈವ ಸಿದ್ದನಕುಂಟೆ ಸಿದ್ದಯ್ಯ ಬರಗೂರು ಬಳಿ ನೆಲೆನಿಂತು 5 ಅಂಬುಗಳ ಅಣ್ಣ ತಮ್ಮಂದಿರುಗಳಿಗೆ ಮನೆದೇವರಾಗಿದ್ದಾರೆ. ಸಿದ್ದೇಶ್ವರ ಸ್ವಾಮಿ, ಕಾಲ ಭೈರವೇಶ್ವರಸ್ವಾಮಿ ಹಟ್ಟಿ ಶಿಥಿಲವಾಗಿದ್ದ ಕಾರಣ ಭಕ್ತರೆಲ್ಲರೂ ಅಣ್ಣ ತಮ್ಮಂದಿರು ನೆಂಟರು ಸೇರಿಕೊಂಡು ನೂತನ ಗುಡಿ ಕಟ್ಟಿಸಿದ್ದೇವೆ ಎಂದರು.
ಪೊಲೀಸ್ ನಿವೃತ್ತ ಅಧಿಕಾರಿ ಹಾರೋಗೇರೆ ಮಾರಣ್ಣ, ಚಿಕ್ಕಬಾಣಗೆರೆ ಜಯರಾಮ್, ಸಿದ್ದಪ್ಪ, ಶೆಟ್ಟಿಗೊಂಡನಹಳ್ಳಿ ತಿಮ್ಮರಾಯಪ್ಪ, ಕನಕ ಬ್ಯಾಂಕಿನ ನೌಕರ ಮಡಲೂರು ಈರಣ್ಣ, ಪಟ್ಟದ ಪೂಜಾರಿ ಮಂಜಣ್ಣ, ಚಂಗಾವರದ ಯಡ್ಡಪ್ಪನ ಕಣತಿ, ಹೊನ್ನೇನಹಳ್ಳಿ ಬುಡ್ಡಜ್ಜನಹಟ್ಟಿ ಯಡ್ಡಪ್ಪ, ಮುಂಗಣ್ಣ, ಮಡ್ಡಿಮಾರಣ್ಣ, ಬರಮುಗಿ ಈರಣ್ಣ, ದೇವರುಗಳ ಭಕ್ತರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


