ತುಮಕೂರು :ಕುಣಿಗಲ್ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಪಾವಸಂದ್ರ ಗ್ರಾಮದ ಕಲ್ಲುಕ್ವಾರಿಯಲ್ಲಿ ಮುಂಗಡ ಹಣದ ನೆಪದಲ್ಲಿ ಕಳೆದ 25 ವರ್ಷಗಳಿಂದ ಅಕ್ರಮವಾಗಿ ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದ ಭೋವಿ ಜನಾಂಗದ 12 ಮಂದಿ ಕಾರ್ಮಿಕರನ್ನು ಅಧಿಕಾರಿಗಳ ಜಂಟಿ ತಂಡ ಯಶಸ್ವಿಯಾಗಿ ರಕ್ಷಿಸಿದೆ. ಈ ಸಂಬಂಧ ತುಮಕೂರು ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು ‘ಕರ್ನಾಟಕ ಜೀತ ಕಾರ್ಮಿಕ ಪದ್ಧತಿ ವಿಮುಕ್ತಿ ಕಾಯ್ದೆ 1976’ ರ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಸಂತ್ರಸ್ತರಿಗೂ ಜೀತ ಪದ್ಧತಿಯಿಂದ ವಿಮುಕ್ತಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಪಾವಸಂದ್ರ ಗ್ರಾಮದ ಸರ್ವೇ ನಂಬರ್ 34 ರ ಕಲ್ಲುಬಂಡೆಯಲ್ಲಿ ಕಲ್ಲುಗಣಿಗಾರಿಕೆ ಕೆಲಸಕ್ಕೆ ಕಾರ್ಮಿಕರನ್ನು ಜೀತದಾಳುಗಳಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ದೂರಿನನ್ವಯ, ಕುಣಿಗಲ್ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಹಾಗೂ ‘ಮುಕ್ತಿ ಸಂಸ್ಥೆ’ಯ ಪ್ರತಿನಿಧಿಗಳು ದಿ: 21-07-2026 ರಂದು ಜಂಟಿ ಸ್ಥಳ ತನಿಖೆ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು, ಸಿಡಿಪಿಒ, ಕಾರ್ಮಿಕ ಅಧಿಕಾರಿಗಳು, ಪೊಲೀಸ್ ಉಪನಿರೀಕ್ಷಕರು, ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಬೆಂಗಳೂರಿನ ಮುಕ್ತಿ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸ್ಥಳ ತನಿಖೆ ಮತ್ತು 21 ಅಂಶಗಳನ್ನೊಳಗೊಂಡ ಜೀತದಾಳು ಗುರುತಿನ ನಮೂನೆಯ ಪರಿಶೀಲನೆಯಲ್ಲಿ ಕ್ರೂರ ಶೋಷಣೆ ಬೆಳಕಿಗೆ ಬಂದಿದೆ. ಚನ್ನೇಗೌಡ, ಶಶಿಕುಮಾರ್ ಮತ್ತು ರಘು ಎಂಬ ಮಾಲೀಕರಿಂದ ಮುಂಗಡ ಹಣ ಪಡೆದಿದ್ದ ಕಾರ್ಮಿಕರು, ಅದನ್ನು ತೀರಿಸಲು ದಿನಕ್ಕೆ 12 ಗಂಟೆಗೂ ಹೆಚ್ಚು ಕಾಲ ವಿಶ್ರಾಂತಿ ಇಲ್ಲದೆ ಸೈಜು ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದರು. ಪಡೆದ ಮುಂಗಡ ಹಣಕ್ಕೆ ಅತಿಯಾದ ಬಡ್ಡಿ ಸೇರಿಸಿ ಕೂಲಿಯಲ್ಲಿ ಸರಿಯಾಗಿ ಕಡಿತಗೊಳಿಸದೆ ಸಾಲದ ಸುಳಿಯಲ್ಲಿ ಸಿಲುಕಿಸಲಾಗಿತ್ತು. ಅಷ್ಟೇ ಅಲ್ಲದೆ, ಹೊರಗೆ ಹೋಗಿ ಬರಲು ಮುಕ್ತ ಸ್ವಾತಂತ್ರ್ಯ ನೀಡದೆ, ವಾಸಿಸುವ ಸ್ಥಳದಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸಿರಲಿಲ್ಲ. ಬೇರೆ ಮಾಲೀಕರ ಬಳಿ ಕೆಲಸಕ್ಕೆ ಹೋದರೆ ಸುಮಾರು ₹4 ಲಕ್ಷ ಸಾಲ ತೀರಿಸುವಂತೆ ಹೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ರಕ್ಷಿಸಲ್ಪಟ್ಟ ಸಂತ್ರಸ್ತರಲ್ಲಿ ಚಲುವಾಬೋವಿ, ಸರಸ್ವತಿ, ಪಳನಿ, ಸರೋಜ, ಸೌಮ್ಯ, ಪುರುಷೋತ್ತಮ, ರವಿ, ಪವಿತ್ರ, ಕೃಷ್ಣ, ಮಂಜುಳ, ಆರ್ಮೂಗಂ ಹಾಗೂ ಭಾಗ್ಯಮ್ಮ ಸೇರಿದ್ದಾರೆ. ರಕ್ಷಿಸಲ್ಪಟ್ಟ ಎಲ್ಲಾ ಸಂತ್ರಸ್ತರನ್ನು ಪ್ರಸ್ತುತ ಕುಣಿಗಲ್ನ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಉಪವಿಭಾಗಾಧಿಕಾರಿಗಳು ತಮ್ಮ ಅಧಿಕಾರವನ್ನು ಚಲಾಯಿಸಿ, ಕಾಯ್ದೆಯ ನಿಯಮಾವಳಿಗಳ ಪ್ರಕಾರ ಸಂತ್ರಸ್ತರೆಲ್ಲರನ್ನೂ ಜೀತ ಪದ್ಧತಿಯಿಂದ ಸಂಪೂರ್ಣವಾಗಿ ವಿಮುಕ್ತಿಗೊಳಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


