ತುಮಕೂರು: ವಿಬಿ ಜಿ ರಾಮ್ ಜಿ ಯೋಜನೆಯಡಿ ಕೇಂದ್ರದಿಂದ ಕೂಲಿ ಹಣ ಬರುತ್ತಿಲ್ಲ. ಬರ ಪರಿಸ್ಥಿತಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಜನರು ಗುಳೆ ಹೋಗುತ್ತಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವೇ ಹಣ ಖರ್ಚು ಮಾಡಿ ಉದ್ಯೋಗ ನೀಡಿ, ಜನರು ಗುಳೆ ಹೋಗುವುದನ್ನು ತಪ್ಪಿಸಬೇಕಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂಗಳವಾರ ವಿಧಾನಸೌಧದಲ್ಲಿ ರಾಜ್ಯದ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಕುಣಿಗಲ್ ತಹಶೀಲ್ದಾರ್ ಅವರ ಕಚೇರಿಯಿಂದ ಭಾಗವಹಿಸಿ ಮಾತನಾಡಿದ ಡಿಸಿಎಂ ಅವರು, ‘ಬರದಿಂದ ಉದ್ಯೋಗಕ್ಕಾಗಿ ಎಲ್ಲಿಗೆ ಹೋಗಬೇಕು? ಉತ್ತರ ಕರ್ನಾಟಕ ಭಾಗದಲ್ಲಿ ಜನ ಗುಳೆ ಹೋಗುತ್ತಿದ್ದಾರೆ. ಕೂಲಿ ಪಾವತಿಯಾಗದೇ ತಡೆಯಾಗಿರುವ ಏಳು ದಿನದ ಒಳಗಾಗಿ ಹಣ ಪಾವತಿಸಬೇಕು. ಕೂಲಿ ಹಣ ಪಾವತಿಯಾಗದೇ ಹೋದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೀಡುವ ಕೆಲಸ ಎಂದೂ ಯಶಸ್ವಿಯಾಗಲು ಸಾಧ್ಯವಿಲ್ಲ. ಅವರಿಗೆ ತಕ್ಷಣ ಕೆಲಸ ಕೊಟ್ಟು ಉದ್ಯೋಗ ಒದಗಿಸಬೇಕು’ ಎಂದು ಹೇಳಿದರು.
ಬರನಿರ್ವಹಣೆ, ಕುಡಿಯುವ ನೀರಿನ ಪರಿಸ್ಥಿತಿ ಪರಿಶೀಲನೆ ಕುರಿತು ಜಿಲ್ಲಾ ಪ್ರವಾಸ ಕೈಗೊಂಡಿರುವುದರಿಂದ ಸಂವಾದದಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದ ಡಿಸಿಎಂ ಅವರು ಸಿದ್ದರಾಮಯ್ಯ ಅವರ ಸಿಎಂ ಆದ ನಂತರ ಸರ್ಕಾರವು ಜನರ ಹತ್ತಿರ ತೆರಳುವಂತಹ ಕೆಲಸ ಮಾಡುತ್ತಿದೆ. ಎಲ್ಲ ಜನಪ್ರತಿನಿಧಿಗಳು ಜನರ ಅಹವಾಲುಗಳನ್ನು ಕೇಳಬೇಕು. ಅಧಿಕಾರಿಗಳು ಜನರಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಜಾಸೇವಾ ಇಲಾಖೆಯನ್ನು ಪ್ರಾರಂಭ ಮಾಡಿದ್ದಾರೆ ಎಂದು ಹೇಳಿದರು.
ಜನರ ಸಮಸ್ಯೆ ಆಲಿಕೆಗೆ ಪ್ರಜಾಸೇವಾ ಇಲಾಖೆ: ಪ್ರತಿಯೊಂದು ಜಿಲ್ಲೆ, ತಾಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ನಿಯೋಜಿಸಿ, ಜನರು ಸಮಸ್ಯೆಗಳನ್ನು ಆಲಿಸಿ ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪ್ರಜಾಸೇವಾ ಇಲಾಖೆಯನ್ನು ಆರಂಭಿಸಲಾಗಿದೆ. ಜನರು ಗ್ರಾಮೀಣ ಭಾಗದಲ್ಲಿ ಅನೇಕ ಸಮಸ್ಯೆ ಎದುರಿಸುತ್ತಿದ್ದು, ಈಗಲೂ ಸಾಕಷ್ಟು ಜನರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಸವಲತ್ತುಗಳು ನೇರವಾಗಿ ಜನರಿಗೆ ತಲುಪುತ್ತಿಲ್ಲ. ಈ ಬಗ್ಗೆ ಯಾರ ಹತ್ತಿರ ಹೋಗಬೇಕು ಎಂಬ ಜನರ ಪ್ರಶ್ನೆಗೆ ಪ್ರಜಾಸೇವಾ ಇಲಾಖೆ ಉತ್ತರವಾಗಲಿದೆ ಎಂದರು.
ರಾಜ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳಿವೆ. ಅದರಲ್ಲಿ 2,500 ಮಳೆ ಮಾಪನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ. 50 ಇಲಾಖೆ ಕೂಡಲೇ ದುರಸ್ತಿಗೊಳಿಸಬೇಕು. ಅಗತ್ಯ ಇರುವ ಕಡೆ ಹೊಸದಾಗಿ ಮಳೆ ಮಾಪನ ಕೇಂದ್ರಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ನಲ್ಲಿ ಬರ ಪರಿಸ್ಥಿತಿ ಮತ್ತಷ್ಟು ತೀವ್ರವಾಗಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಎಲ್ಲ ಅಧಿಕಾರಿಗಳು ಎಮರ್ಜೆನ್ಸಿ ಎಂದು ಪರಿಗಣಿಸಿ ಕೆಲಸ ಮಾಡಬೇಕಾಗಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆಯನ್ನು ನೀಡುವ ಮೂಲಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಕೆಲಸ ಮಾಡಬೇಕು. ಈ ಬಗ್ಗೆ ಆಯಾ ಜಿಲ್ಲಾ ಸರ್ವಜನಿಕರಿಂದ ವೀಡಿಯೋ ಎಂದು ಡಿಸಿಎಂ ಸೂಚಿಸಿದರು.
ನಮ್ಮ ಕೆರೆ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ. ಕೆಆರ್ ಎಸ್ ಕೆಳಭಾಗದ ಕಬಿನಿ, ಹೇಮಾವತಿಯಲ್ಲಿ ಸ್ವಲ್ಪ ಮಟ್ಟಿಗೆ ನೀರಿದ್ದು, ಅದನ್ನು ಸೇವನೆಗೆ ಮಾಡಿ ಇಟ್ಟುಕೊಂಡಿದ್ದೇವೆ. ಇವತ್ತು 12,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂದರೆ ಅಷ್ಟು ನೀರು ನಮ್ಮಲ್ಲಿ ಬೇಕು. ಜಲಾಶಯಗಳ ಒಳಹರಿವು ಹೆಚ್ಚಾಗಬೇಕು. ಆದರೆ ಅದು ಆಗಿಲ್ಲ. ಹಾಗಾಗಿ ಮುಂದಿನ ತೀರ್ಮಾನವನ್ನು ಬುಧವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸಿಕೊಳ್ಳುತ್ತೇವೆ.
— ಡಾ.ಜಿ.ಪರಮೇಶ್ವರ್, ಡಿಸಿಎಂ.
ಈ ವರ್ಷ ಬರ ಪರಿಸ್ಥಿತಿ ಗಂಭೀರವಾಗಿದೆ. ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ತಾಲೂಕುಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ರೈತರು ಒಂದು ಎಕರೆ ಶೇಂಗಾ ಬಿತ್ತನೆಗೆ 40 ಸಾವಿರ ರೂ. ಖರ್ಚು ಮಾಡಿದ್ದಾರೆ. ಅವರಿಗೆ ಒಂದು ರೂ. ಫಸಲು ಬರುವ ಸಾಧ್ಯತೆ ಇಲ್ಲ. ಫಸಲಿಗಾಗಿ ಮುಂಗಾರಿನಲ್ಲಿ ಬೆಳೆದ ಅಡಿಕೆ ಬೆಳೆಗೆ ನೀರಿನ ಕೊರತೆಯಿಂದ ಸಂಪೂರ್ಣವಾಗಿ ಒಣಗುತ್ತಿದೆ. ಒಣಗಿದ ರೈತರ ಸಂಕಷ್ಟದ ಸಂದರ್ಭದಲ್ಲಿ ಅವರ ನೆರವಿಗೆ ನಿಲ್ಲುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿಯೂ ಬೋರ್ವೆಲ್ಗಳು ಬತ್ತಿ ಹೋಗುತ್ತಿವೆ. ನೂರು ಅಡಿ ತೋಡಿದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಈ ಎಲ್ಲಾ ಸಮಸ್ಯೆಯನ್ನು ಪ್ರತ್ಯೇಕವಾಗಿ ನೋಡಿದ್ದೇನೆ. ಸರ್ಕಾರ ನಿಮ್ಮ ಜೊತೆಗಿದೆ ಎಂದು ಜನರಿಗೆ ಭರವಸೆ ನೀಡಿದ್ದೇನೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುತ್ತದೆ. ತುಮಕೂರು ಹಾಲು ಉತ್ಪಾದಕ ಒಕ್ಕೂಟ ‘ವತಿಯಿಂದ’ ಜಿಲ್ಲೆಯಾದ್ಯಂತ ರೈತರಿಗೆ ಒಂದು ಲಕ್ಷ ಕ್ವಿಂಟಾಲ್ ಮೇವಿನ ಬೀಜ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನೀರಿನ ಸೌಲಭ್ಯ ಇರುವ ರೈತರು ಮೇವು ಬೆಳೆಯುತ್ತಾರೆ. ಹೆಚ್ಚು ಮೇವು ಬೆಳೆದ ರೈತರಿಂದ ಖರೀದಿಸಲಾಗುವುದು. ಪಶು ಸಂಗೋಪನಾ ಇಲಾಖೆಯಿಂದ ಮೇವಿನ ಬೀಜ ವಿತರಿಸಲು ಈವರೆಗೂ ಟೆಂಡರ್ ಕರೆದಿಲ್ಲ. ಈ ಬಗ್ಗೆ ಅಧಿಕಾರಿಗಳು ಶೀಘ್ರದಲ್ಲಿ ಕ್ರಮ ವಹಿಸಬೇಕು ಎಂದು ಸಿಎಸ್ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದರು.
ಭಾರತ್ ಜೋಡೋ ಸಂಘ ಫ್ಲ್ಯಾಗ್ ಶಿಪ್ ಕಾರ್ಯಕ್ರಮ
ಭಾರತ್ ಜೋಡೋ ಸಂಘ ಕಾರ್ಯಕ್ರಮ ಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸಿನ ಕೂಸಿನ ಯೋಜನೆ. ಧರ್ಮ, ಜಾತಿ ಆಧಾರದ ಮೇಲೆ ವಿಂಗಡಣೆಯಾಗುತ್ತಿರುವ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಂದು ಪಂಚಾಯಿತಿಯಲ್ಲಿ ನಾಲ್ಕು ಸಾವಿರ ಜನಸಂಖ್ಯೆ ಇರುವ ಕಡೆ ಒಂದು ಸಂಘ ರಚಿಸಬೇಕು. ಸಂಘದಲ್ಲಿ ಎಲ್ಲಾ ವರ್ಗದ ಜನರು ಪಾಲ್ಗೊಳ್ಳಬೇಕು. ಸಮಾಜದ ಶೋಷಿತ, ಹಿಂದುಳಿದ ವರ್ಗಗಳನ್ನು ಸಂಘದಿಂದ ಕೈಬಿಡಬಾರದು ಎಂಬ ನಿಟ್ಟಿನಲ್ಲಿ ಸಂಘದ ಸದಸ್ಯತ್ವಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ಸಂಘದ ಕಾರ್ಯಚಟುವಟಿಕೆ ನಡೆಸಲು ಶಾಲಾ-ಕಾಲೇಜು, ಪಂಚಾಯಿತಿಗೆ ಸಂಬಂಧಿಸಿದ ಕಟ್ಟಡಗಳನ್ನು ಬಳಸಿಕೊಳ್ಳಬೇಕು. ಇದು ಸರ್ಕಾರಕ್ಕೆ ಫ್ಲ್ಯಾಗ್ಶಿಪ್ ಕಾರ್ಯಕ್ರಮ. ಈ ಯೋಜನೆಗೆ 1000 ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ ಎಂದರೆ ಸಾಮಾನ್ಯ ಕಾರ್ಯಕ್ರಮವಲ್ಲ. ಆಗಸ್ಟ್ ತಿಂಗಳ ಕೊನೆ ವೇಳೆ ಸಂಘದ ನೋಂದಣಿಯನ್ನು ಪೂರ್ಣಗೊಳಿಸಲು ಗುರಿ ನೀಡಿದ್ದು, ನೋಂದಣಿ ಪೂರ್ಣಗೊಳಿಸಿದ ಬಳಿಕ ಸಿಎಂ ಅವರು ಚಾಲನೆ ನೀಡಲಿದ್ದಾರೆ ಎಂದರು.
ವಿಮೆ ಕಂಪನಿಯವರೊಂದಿಗೆ ವಿಶೇಷ ಸಭೆಯ ಅಗತ್ಯವಿದೆ:
ರಾಜ್ಯದಲ್ಲಿ ರೈತರಿಗೆ ವಿಮಾ ಹಣ ನೀಡುತ್ತಿಲ್ಲ. ಹಣ ಕಟ್ಟಿಸಿಕೊಳ್ಳುವಾಗ ತೋರಿಸುವ ಆಸಕ್ತಿ, ಬೆಳೆ ನಷ್ಟದ ಸಂದರ್ಭದಲ್ಲಿ ಹಣ ಬಿಡುಗಡೆ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ಈ ಕುರಿತಂತೆ ವಿಮಾ ಕಂಪನಿಯವರೊಂದಿಗೆ ಸಭೆ ನಡೆಸಬೇಕಾಗುತ್ತದೆ. ಶಿರಾ ತಾಲೂಕಿನಲ್ಲಿ ಬೇಸಿಗೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ದಾಳಿಂಬೆ ಬೆಳೆ ಸಂಪೂರ್ಣ ನಾಶವಾಗಿತ್ತು. ಈವರೆಗೂ ದಾಳಿಂಬೆ ಬೆಳೆ ನಷ್ಟಕ್ಕೆ ಇನ್ಶೂರೆನ್ಸ್ ಕ್ಲಿಯರ್ ಆಗಿಲ್ಲ. ಇದು ರಾಜ್ಯಾದ್ಯಂತ ಇರುವ ಸಮಸ್ಯೆ. ಈ ಬಗ್ಗೆ ಇನ್ಶೂರೆನ್ಸ್ ಕಂಪನಿಯವರೊಂದಿಗೆ ವಿಶೇಷ ಸಭೆ ನಡೆಸುವ ಅಗತ್ಯತೆ ಇದೆ ಎಂದು ಈ ವೇಳೆ ಮುಖ್ಯಮಂತ್ರಿಯವರಿಗೆ ತಿಳಿಸಿದರು. ವಿಡಿಯೋ ಸಂವಾದದಲ್ಲಿ ಡಿಸಿಎಂ ಅವರಿಗೆ ಶಾಸಕ ಡಾ.ಎಚ್.ಡಿ.ರಂಗನಾಥ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ರಾಜ್ ಮೌರ್ಯ ಸಾಥ್ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
