ಬೆಂಗಳೂರು: ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ಮೊದಲ ದಿನದಂದು, ಇತ್ತೀಚೆಗೆ ಅಗಲಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಸೇರಿದಂತೆ ಪ್ರಮುಖ ಗಣ್ಯರಿಗೆ ವಿಧಾನಸಭೆಯಲ್ಲಿ ಭಾವುಕ ಸಂತಾಪ ಸೂಚಿಸಲಾಯಿತು.
ಸಂತಾಪ ಸೂಚನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಚೆನ್ನಮ್ಮ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿದರು.
“ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರು ಓರ್ವ ರಾಜಕಾರಣಿಯ ಮನೆಯಲ್ಲಿ ಯಾವ ರೀತಿ ಇರಬೇಕು ಎಂಬುದಕ್ಕೆ ಉತ್ತಮ ನಿದರ್ಶನವಾಗಿದ್ದರು. ಪ್ರತಿಯೊಂದು ಕಷ್ಟ-ಸುಖದ ಸಂದರ್ಭದಲ್ಲೂ ದೇವೇಗೌಡರ ಕುಟುಂಬದ ಜೊತೆಯಾಗಿ ನಿಂತವರು. ಅವರು ತ್ಯಾಗಮಯಿ ಹೆಣ್ಣುಮಗಳು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಾಗುತ್ತದೆ” ಎಂದು ಸಿಎಂ ಸ್ಮರಿಸಿದರು.
ಚೆನ್ನಮ್ಮ ಅವರ ಅಂತ್ಯಕ್ರಿಯೆಗೆ ಸರ್ಕಾರಿ ಗೌರವ ನೀಡಿರುವ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, “ಮಾಜಿ ಪ್ರಧಾನಿಯವರ ಪತ್ನಿಗೆ ಸರ್ಕಾರಿ ಗೌರವ ನೀಡಬಹುದೇ ಎಂಬ ಚರ್ಚೆಗಳು ಬಂದಾಗ ನಾನು ದಿಟ್ಟ ನಿರ್ಧಾರ ತಳೆದೆ. ಅಧಿಕಾರದಲ್ಲಿದ್ದಾಗ ನಾವು ಹೃದಯ ಶ್ರೀಮಂತಿಕೆ ಪ್ರದರ್ಶಿಸಬೇಕು. ಅವರು ರಾಜ್ಯಕ್ಕೆ ದೊಡ್ಡ ದೊಡ್ಡ ರಾಜಕಾರಣಿ ಮಕ್ಕಳನ್ನು ಕೊಟ್ಟ ಹಿರಿಯ ಜೀವ. ಅಂತಹವರಿಗೆ ನಾವು ಸೂಕ್ತ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ” ಎಂದು ಸ್ಪಷ್ಟಪಡಿಸಿದರು.
ಅಗಲಿದ ಚೆನ್ನಮ್ಮ ಅವರ ಆತ್ಮಕ್ಕೆ ಶಾಂತಿ ಕೋರಿದ ಮುಖ್ಯಮಂತ್ರಿಗಳು, ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
