ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಧೂಪತಮಹಾಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಬಿ–ಜಿ ರಾಮ್‌ಜಿ ಯೋಜನೆಯಡಿ ನಡೆಯುತ್ತಿರುವ ಸಿಸಿಟಿ ಕಾಮಗಾರಿ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಮಗಾರಿ ಸ್ಥಳದಲ್ಲಿದ್ದ ಕೂಲಿಕಾರ್ಮಿಕರೊಂದಿಗೆ ಸಂವಾದ ನಡೆಸಿದ ಸಚಿವರು, ಸ್ವತಃ ಬುಟ್ಟಿಯಲ್ಲಿ ಮಣ್ಣು ಎತ್ತಿ ಹಾಕಿ ಕೂಲಿ ಕೆಲಸದಲ್ಲಿ ಭಾಗವಹಿಸಿದರು. ವಿಬಿ–ಜಿ ರಾಮ್‌ಜಿ ಯೋಜನೆಯಡಿ ಕೂಲಿಕಾರ್ಮಿಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಹಲವು ಬದಲಾವಣೆ ಮಾಡಲಾಗಿದೆ ಎಂದರು. ದಿನಗೂಲಿಯನ್ನು ರೂ.370ರಿಂದ ರೂ.382ಕ್ಕೆ ಹೆಚ್ಚಿಸಲಾಗಿದೆ. ವಾರ್ಷಿಕ ಉದ್ಯೋಗ ದಿನಗಳನ್ನು 100ರಿಂದ 125ಕ್ಕೆ ಹಾಗೂ ಕಾಮಗಾರಿಗಳ ಸಂಖ್ಯೆಯನ್ನು 318ಕ್ಕೆ ಹೆಚ್ಚಿಸಲಾಗಿದೆ. ಗ್ರಾಮೀಣ ಕೂಲಿಕಾರ್ಮಿಕರು ಇದರ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.
ಜುಲೈ 1ರಿಂದ ಜಾರಿಗೆ ಬಂದಿರುವ ವಿಬಿ–ಜಿ ರಾಮ್‌ಜಿ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 60:40 ಅನುಪಾತದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಅರ್ಹ ಕೂಲಿಕಾರ್ಮಿಕನಿಗೂ ಕೆಲಸ ನೀಡಿ, ಉದ್ಯೋಗಕ್ಕಾಗಿ ಯಾರೂ ಗುಳೆ ಹೋಗದಂತೆ ಗ್ರಾಮದಲ್ಲಿಯೇ ಕೆಲಸ ಒದಗಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.
ಇದೇ ವೇಳೆ ಯೋಜನೆಯಡಿ ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿಗಳ ಆದೇಶ ಪತ್ರಗಳನ್ನು ವಿತರಿಸಲಾಯಿತು. ಇದು ಗ್ರಾಮೀಣ ಕುಟುಂಬಗಳ ಜೀವನೋಪಾಯಕ್ಕೆ ನೆರವು ನೀಡುವುದರ ಜೊತೆಗೆ ಆರ್ಥಿಕ ಸ್ಥಿತಿ ಸುಧಾರಿಸಲು ಅವಕಾಶ ಕಲ್ಪಿಸಲಿದೆ ಎಂದರು. ಅಲ್ಲದೆ, ಕಾಮಗಾರಿ ಸ್ಥಳದಲ್ಲಿಯೇ ಕೂಲಿಕಾರ್ಮಿಕರಿಗಾಗಿ ಆರೋಗ್ಯ ತಪಾಸಣೆ ಆಯೋಜಿಸಲಾಗಿದ್ದು, ಆರೋಗ್ಯ ಸಿಬ್ಬಂದಿ ತಪಾಸಣೆ ನಡೆಸಿ ಅಗತ್ಯ ಸಲಹೆ ಹಾಗೂ ಸೇವೆ ಒದಗಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ದಿಲೀಪ್ ಬದೋಲೆ, ತಹಸೀಲ್ದಾರ್ ಮಹೇಶ ಪಾಟೀಲ್, ಕಾರ್ಯದರ್ಶಿ ಜೈಪ್ರಕಾಶ ಚವ್ಹಾಣ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ಸಿಪಿಐ ರಘುವೀರಸಿಂಗ್ ಠಾಕೂರ್, ಟಿಎಚ್‌ಒ ಡಾ. ಅನಿಲಕುಮಾರ ಎಕಲಾರೆ, ಪಿಎಸ್‌ಐ ದಿನೇಶ್, ಪಿಡಿಒ ನಂದಕುಮಾರ ಶಾಸ್ತ್ರಿ, ತಾಪಂ ಹಾಗೂ ಗ್ರಾಪಂ ಸಿಬ್ಬಂದಿಯವರು, ಸಾರ್ವಜನಿಕರು ಮತ್ತು ಕೂಲಿಕಾರ್ಮಿಕರು ಹಾಜರಿದ್ದರು.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
