ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಕನಿಕಲಬಂಡೆ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ರೈತರೊಬ್ಬರ ಬೋರ್ವೆಲ್ ಮೋಟಾರ್ ಆನ್ ಮಾಡುತ್ತಿದ್ದಂತೆ ನಾಡ ಬಾಂಬ್ ಸ್ಫೋಟಗೊಂಡಿರುವ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ಬೆಳಗ್ಗೆ ರೈತ ಗಿರಿಯಪ್ಪ ತಮ್ಮ ಜಮೀನಿನಲ್ಲಿ ಬೋರ್ವೆಲ್ ಮೋಟಾರ್ ಆನ್ ಮಾಡಲು ಮುಂದಾಗಿದ್ದಾರೆ. ಸ್ಟಾರ್ಟರ್ ಆನ್ ಮಾಡಿದ ತಕ್ಷಣವೇ ತೀವ್ರ ಸ್ಫೋಟ ಸಂಭವಿಸಿದೆ. ಈ ದೊಡ್ಡ ಅಪಾಯದಿಂದ ಗಿರಿಯಪ್ಪ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡು ಪಂಪ್ ಹೌಸ್ ನ ಮೂಲೆಯಲ್ಲಿ ಪರಿಶೀಲಿಸಿದಾಗ, ಮತ್ತೊಂದು ಜೀವಂತ ನಾಡ ಬಾಂಬ್ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕಳೆದ 3 ತಿಂಗಳ ಹಿಂದೆ ವೆಂಕಟೇಶ್ ಎಂಬಾತ ಜಮೀನಿಗೆ ನುಗ್ಗಿ, “ಈ ಜಮೀನು ನಮಗೆ ಸೇರಿದ್ದು” ಎಂದು ಗಿರಿಯಪ್ಪ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದನು. ಈ ಕುರಿತು ಗಿರಿಯಪ್ಪ ಅವರು ಪಾವಗಡ ಪೊಲೀಸ್ ಠಾಣೆಗೆ ದೂರು ಕೂಡ ದಾಖಲಿಸಿದ್ದರು. ಇದೇ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವೆಂಕಟೇಶ್ ನೇರವಾಗಿ ಬೋರ್ವೆಲ್ ಮೋಟಾರ್ ಸ್ಟಾರ್ಟರ್ನಲ್ಲಿ ಬಾಂಬ್ ಇರಿಸಿ, ಗಿರಿಯಪ್ಪ ಅವರನ್ನು ಕೊಲೆ ಮಾಡಲು ಸಂಚು ಹೂಡಿದ್ದನೆಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿ ವೆಂಕಟೇಶ್ ಕೇವಲ ಇಷ್ಟಕ್ಕಷ್ಟೇ ನಿಲ್ಲದೆ, ಗ್ರಾಮಸ್ಥರಿಗೆ ಪಿಸ್ತೂಲ್ ಮತ್ತು ಬಾಂಬ್ಗಳನ್ನು ತೋರಿಸಿ ಬೆದರಿಸಿ ಹಣ ಹಾಗೂ ಆಹಾರ ಧಾನ್ಯಗಳನ್ನು ಸುಲಿಗೆ ಮಾಡುತ್ತಿದ್ದನು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಘಟನೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದು, ಮಧುಗಿರಿ ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಮಂಜುನಾಥ್ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ವೆಂಕಟೇಶ್ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
