ಕುಣಿಗಲ್: ಅಧಿಕಾರಿಗಳ ಎಡವಟ್ಟಿನಿಂದಾಗಿ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಹಾಗೂ ಗ್ರೇಡ್–2 ತಹಶೀಲ್ದಾರ್ ಕೋರ್ಟ್ ಕಲಾಪ ಏಕ ಕಾಲದಲ್ಲಿ ನಡೆದು ತಹಶೀಲ್ದಾರ್ ನ್ಯಾಯಾಲಯದ ಸಭಾಂಗಣದಲ್ಲಿ ಗೊಂದಲಕ್ಕೆ ಕಾರಣವಾದ ಪ್ರಸಂಗ ಮಂಗಳವಾರ ನಡೆಯಿತು.
ರಾಜ್ಯದ ಪ್ರತಿ ಜಿಲ್ಲಾ ಮತ್ತು ತಾಲೂಕುಗಳಲ್ಲಿ ಸೆ.15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಆಯೋಜಿಸುವಂತೆ ಸರ್ಕಾರದ ಸ್ಪಷ್ಟ ಆದೇಶದ ಹಿನ್ನೆಲೆಯಲ್ಲಿ ಇಲ್ಲಿನ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಯು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ಇಲ್ಲಿನ ತಹಶೀಲ್ದಾರ್ ನ್ಯಾಯಾಲಯದ ಸಭಾಂಗಣದಲ್ಲಿ ಆಯೋಜಿಸಿತ್ತು.
ಸಭಾಂಗಣದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ, ಭಾರತದ ಸಂವಿಧಾನ ಪೀಠಿಕೆಯನ್ನು ಇಡಲಾಗಿತ್ತು. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹೊರತು ಪಡಿಸಿ ಬೇರೆ ಯಾವ ಅಧಿಕಾರಿಯೂ ಭಾಗವಹಿಸಿರಲಿಲ್ಲ. ಇದೇ ನ್ಯಾಯಾಲಯದ ಸಭಾಂಗಣದಲ್ಲಿ ಗ್ರೇಡ್–2 ತಹಶೀಲ್ದಾರ್ ಲೀಲಾವತಿ ಅವರು ನ್ಯಾಯಾಲಯದ ಕಲಾಪ ತೆಗೆದುಕೊಂಡಿದ್ದರು. ಹಲವಾರು ವಕೀಲರು, ಕಕ್ಷಿದಾರರು ಕೋರ್ಟ್ನಲ್ಲಿ ಭಾಗವಹಿಸಿದ್ದರು.
ಆದರೆ ನ್ಯಾಯಾಲಯ ಸಭಾಂಗಣದಲ್ಲಿ ಪ್ರಜಾಪ್ರಭುತ್ವ ದಿನ ಆಚರಣೆ ನಡೆಯುತ್ತಿದೆಯೋ ಅಥವಾ ನ್ಯಾಯಾಲಯದ ಕಲಾಪ ನಡೆಯುತ್ತಿದೆಯೋ ಒಂದೂ ತಿಳಿಯದಂತಾಗಿ ಗೊಂದಲಕ್ಕೆ ಕಾರಣವಾಗಿತ್ತು. ಇದು ಕಾಟಾಚಾರದ ಕಾರ್ಯಕ್ರಮವಾಗಿದೆ ಎಂದು ಸಭೆಗೆ ಆಗಮಿಸಿದ ಕೆಲ ಸಂಘಟನೆಗಳ ಪದಾಧಿಕಾರಿಗಳು ಆರೋಪಿಸಿದರು. ಈ ನಡುವೆ ಕಸಾಪ ಅಧ್ಯಕ್ಷ ಡಾ. ಕಪನಿಪಾಳ್ಯ ರಮೇಶ್ ಸಂವಿಧಾನ ಪೀಠಿಕೆ ಓದಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಮತಾಮಣಿ, ಪ್ರಜಾಪ್ರಭುತ್ವ ಮೌಲ್ಯ, ಸಂವಿಧಾನ ಆಶಯ ಮತ್ತು ಯುವಜನರ ಪಾಲ್ಗೊಳ್ಳುವಿಕೆ ಬಲಪಡಿಸಲು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಸತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಯ್ಯ, ವಕೀಲರ ಸಂಘದ ಅಧ್ಯಕ್ಷ ಎ.ಆರ್.ರಂಗಸ್ವಾಮಿ ಮತ್ತಿತರರು ಇದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಮತಾ ಮಣಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, 2007 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಸ್ಥಾಪಿಸಲ್ಪಟ್ಟ ಈ ದಿನವು ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸಲು ಮತ್ತು ಎತ್ತಿಹಿಡಿಯಲು ಹಾಗೂ ಜಾಗತಿಕವಾಗಿ ಅದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಇದು ಪ್ರಜಾಪ್ರಭುತ್ವದ ಆಡಳಿತ, ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮದ ಮೌಲ್ಯವನ್ನು ನೆನಪಿಸುತ್ತದೆ. ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಬಲಪಡಿಸಲು ಜನರು ಮತ್ತು ಸರ್ಕಾರಗಳನ್ನು ಉತ್ತೇಜಿಸುತ್ತದೆ. ಈ ದಿನವು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಆಡಳಿತದ ಮಹತ್ವವನ್ನು ತೋರಿಸುತ್ತದೆ. ಸ್ವಾತಂತ್ರ್ಯ ಮತ್ತು ಸಮಾನತೆಯ ಪ್ರಚಾರ ಒಳಗೊಂಡಿರುವ ಪ್ರಜಾಪ್ರಭುತ್ವದ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
