ಮಧುಗಿರಿ: ತಾಲ್ಲೂಕು ಕಸಬಾ ಹೋಬಳಿ ವ್ಯಾಪ್ತಿಯಲ್ಲಿರುವ ರಿಷಿ ಕಾಂಪ್ಲೆಕ್ಸ್ (ಡಿಲಕ್ಸ್) ಸಿ.ಎಲ್.–7 ಸನ್ನದು ಆವರಣದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಮದ್ಯ ಹಾಗೂ ಬಿಯರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಶ್ರುತಿ ಕೋಂ ರಾಘವೇಂದ್ರ ಅವರಿಗೆ ಸೇರಿದ ಸದರಿ ಸನ್ನದಿನ ಆವರಣದಲ್ಲಿ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಮಧುಗಿರಿ ಮಹೇಶ್ ಮತ್ತು ಅಗ್ರಹಾರ ನಾಗರಾಜು ಸೇರಿದಂತೆ ಇತರ ಸಾಮಾಜಿಕ ಕಾರ್ಯಕರ್ತರು ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ ದಿನಾಂಕ 02/10/2026 ರಂದು ಅಬಕಾರಿ ಉಪ ಅಧೀಕ್ಷಕರಾದ ದೀಪಕ್ ರವರ ಮಧುಗಿರಿ ಉಪ ವಿಭಾಗದ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಮಧುಗಿರಿ ಉಪ ವಿಭಾಗದ ಅಬಕಾರಿ ನಿರೀಕ್ಷಕರಾದ ಲಿಂಕೆ ಹನುಮಂತಯ್ಯ, ಮಧುಗಿರಿ ಅಬಕಾರಿ ನಿರೀಕ್ಷಕರಾದ ಲತಾ ಬಿ., ಮಧುಗಿರಿ–2 ರ ಅಬಕಾರಿ ಉಪ ನಿರೀಕ್ಷಕರಾದ ಮನು ಬಿ. ಜೆ. ಹಾಗೂ ಅಬಕಾರಿ ಕಾನ್ಸ್ಟೇಬಲ್ ನಾಗೇಶ ಬಾಬು ಜಿ. ಭಾಗವಹಿಸಿದ್ದರು.
ದಾಳಿಯ ವೇಳೆ ಸ್ಥಳದಲ್ಲಿ ಒಟ್ಟು 6.570 ಲೀಟರ್ ಮದ್ಯ ಹಾಗೂ 6.500 ಲೀಟರ್ ಬಿಯರ್ ಅನ್ನು ಅಬಕಾರಿ ಅಧಿಕಾರಿಗಳು ಜಪ್ತುಪಡಿಸಿದ್ದಾರೆ. ಈ ಸಂಬಂಧ ಅಬಕಾರಿ ಕಾನೂನಿನನ್ವಯ ಆರೋಪಿಯಾದ ಬಿ. ಜೆ. ಮಂಜುದೇವಯ್ಯ ಬಿನ್ ಲೇ|| ಜುಂಜಣ್ಣ ಹಾಗೂ ಸಂಬಂಧಿತ ಸನ್ನದುದಾರರ ವಿರುದ್ಧ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
