ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಿಪಟೂರು ತಾಲೂಕಿನ ಕಸಬಾ ವಲಯದ ಗಾಂಧಿನಗರದ ನಿವಾಸಿ ಅಬ್ದುಲ್ ರಹೀಮ್ ರವರಿಗೆ ಕ್ರಿಟಿಕಲ್ ಇಲ್ನೆಸ್ ಫಂಡ್ ಯೋಜನೆಯಡಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ₹20,000/- ಮೊತ್ತದ ಸಹಾಯಧನದ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.
ಬಾಯಿ ಕ್ಯಾನ್ಸರ್ನಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅಬ್ದುಲ್ ರಹೀಮ್ ರವರಿಗೆ ತುಮಕೂರು-1 ಜಿಲ್ಲೆಯ ಯೋಜನಾ ನಿರ್ದೇಶಕರಾದ ಸತೀಶ್ ಸುವರ್ಣ ಅವರು ಮನೆಗೆ ಭೇಟಿ ನೀಡಿ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಅವರು, “ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಚತುರ್ದಾನಗಳಲ್ಲಿ ಒಂದಾದ ಔಷಧಿ ದಾನಕ್ಕೆ ಪೂರಕವಾಗಿ, ನಮ್ಮ ಸಂಘದ ಪಾಲುದಾರ ಬಂಧುಗಳು ಹಾಗೂ ಅವರ ಕುಟುಂಬದ ಸದಸ್ಯರು ಎದುರಿಸುತ್ತಿರುವ ಕ್ಯಾನ್ಸರ್, ಹೃದಯ ಸಂಬಂಧಿ ಹಾಗೂ ಕಿಡ್ನಿ ಕಾಯಿಲೆಗಳಂತಹ ಮಾರಣಾಂತಿಕ ಅನಾರೋಗ್ಯಕ್ಕೆ ಕ್ರಿಟಿಕಲ್ ಇಲ್ನೆಸ್ ಫಂಡ್ ಮೂಲಕ ಪೂಜ್ಯ ವೀರೇಂದ್ರ ಹೆಗ್ಗಡೆಯವರು ವಿಶೇಷ ಸಹಾಯಧನ ನೀಡುತ್ತಿದ್ದು, ಇದು ಕಷ್ಟದಲ್ಲಿರುವ ನೊಂದ ಕುಟುಂಬಗಳಿಗೆ ದೊಡ್ಡ ಆಸರೆಯಾಗಿದೆ,” ಎಂದು ತಿಳಿಸಿದರು.
ಅಲ್ಲದೆ, ಸಂಘದ ಸದಸ್ಯರು ಹಾಗೂ ಅವರ ಕುಟುಂಬದವರು ಪ್ರತಿವರ್ಷ ಜನವರಿ ತಿಂಗಳಿನಲ್ಲಿ ‘ಆರೋಗ್ಯ ರಕ್ಷಾ’ ಮತ್ತು ‘ಸಂಪೂರ್ಣ ಸುರಕ್ಷಾ’ ಯೋಜನೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾವಣೆ ಮಾಡಿಕೊಂಡು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಿಪಟೂರು ತಾಲೂಕು ಯೋಜನಾಧಿಕಾರಿ ಉದಯ್ ಕೆ., ವಲಯ ಮೇಲ್ವಿಚಾರಕರು, ಸ್ಥಳೀಯ ಸೇವಾಪ್ರತಿನಿಧಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
