ತಿರುಪತಿ: ಸಿಂಹದೊಂದಿಗೆ ಸೆಲ್ಫಿ ಕ್ಲಿಕಿಸಲು ಹೋಗಿ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ತಿರುಪತಿ ಮೃಗಾಲಯದಲ್ಲಿ ನಡೆದಿದೆ. ಮೃತನನ್ನು ರಾಜಸ್ಥಾನದ ಪ್ರಹ್ಲಾದ್ ಗುರ್ಜರ್ (38) ಎಂದು ಗುರುತಿಸಲಾಗಿದೆ.
ವ್ಯಕ್ತಿ ಮದ್ಯಪಾನದ ಅಮಲಿನಲ್ಲಿದ್ದು, ಮೃಗಾಲಯ ಕೇರ್ ಟೇಕರ್ ನ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ನಾಲ್ಕು ಅಡಿಯ ಸುರಕ್ಷತಾ ಗೋಡೆಯನ್ನು ಹಾರಿ ಸಿಂಹದ ಗುಹೆಗೆ ಪ್ರವೇಶಿಸಿದ್ದಾನೆ. ಪ್ರಹ್ಲಾದ್ ಸಿಂಹದ ಗುಹೆಗೆ ಬೀಳುತ್ತಿದ್ದಂತೆ ಸಿಂಹ ಆತನ ಮೇಲೆ ದಾಳಿ ಮಾಡಿದ್ದು ಆತನನ್ನು ಸಿಂಹದ ದಾಳಿಯಿಂದ ತಪ್ಪಿಸಲು ಮೃಗಾಲಯದ ಸಿಬ್ಬಂದಿಗಳು ಹರಸಾಹಸವೇ ಪಟ್ಟಿದ್ದಾರೆ. ಕೊನೆಗೆ ಸಿಂಹವನ್ನು ಪಂಜರದಲ್ಲಿ ಬಂಧಿಸಿದ ಬಳಿಕ ಪ್ರಹ್ಲಾದ್ ನನ್ನು ಸಿಂಹದ ಬಾಯಿಯಿಂದ ರಕ್ಷಿಸಿದ್ದಾರೆ. ಆದರೆ ತೀವ್ರವಾಗಿ ಗಾಯಗೊಂಡ ಪರಿಣಾಮ ಪ್ರಹ್ಲಾದ್ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಗುಜ್ಜರ್ ಏಕಾಂಗಿಯಾಗಿ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದು, ಅಧಿಕಾರಿಗಳು ಅವರ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೃಗಾಲಯದ ಕ್ಯುರೇಟರ್ ಸಿ ಸೆಲ್ವಂ ಹೇಳಿದ್ದಾರೆ.


