ರೆಬೆಲ್ ಸ್ಟಾರ್ ಅಂಬರೀಶ್ ಇಂದು ಈ ಭೂಮಿಯ ಮೇಲೆ ಇಲ್ಲ. ಆದ್ರೆ, ಅಂಬರೀಶ್ ನನಗೂ ಕೆಲ ಜವಾಬ್ದಾರಿಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಅಂಬರೀಶ್ ಸಿನಿಮಾರಂಗ ಹಾಗೂ ರಾಜಕೀಯ ರಂಗ ಎರಡಲ್ಲೂ ಸಕ್ರಿಯರಾಗಿ ಸೇವೆ ಸಲ್ಲಿಸಿದವರು. ಅವರು ನನಗೂ ಕೆಲ ಜವಾಬ್ದಾರಿಗಳನ್ನು ಬಿಟ್ಟು ಹೋಗಿದ್ದಾರೆ. ಅದನ್ನು ನಿಭಾಯಿಸಲೇಬೇಕು. ನಾನು ಮಂಡ್ಯ ಬಿಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ನಾಲ್ಕು ಮುಕ್ಕಾಲು ವರ್ಷಗಳಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ ರಾಜಕಾರಣ ಮಾಡಿಕೊಂಡ ಬಂದಿರುವ ಸಂಸದೆ ನಾನು ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಕಳೆದ ನಾಲ್ಕು ಮುಕ್ಕಾಲು ವರ್ಷಗಳ ನನ್ನ ಟ್ರ್ಯಾಕ್ ರೆಕಾರ್ಡ್ ತೆಗೆದು ನೋಡಿ. ಒಂದೇ ಒಂದು ಕಪ್ಪುಚುಕ್ಕೆ ಇಲ್ಲ. ಈ ನಿಟ್ಟಿನಲ್ಲಿ ನನಗೆ ಮಂಡ್ಯ ಕ್ಷೇತ್ರದ ಟಿಕೆಟ್ ಸಿಗುವ ನಿರೀಕ್ಷೆಯಿದೆ ಎಂದಿದ್ದಾರೆ.
ಲೋಕಸಭೆ ಚುನಾವಣೆಗೆ ದಳ – ಕಮಲ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಜೆಡಿಎಸ್ ಮಂಡ್ಯ ಸೇರಿದಂತೆ ಇನ್ನೂ ಮೂರ್ನಾಲ್ಕು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಇಂದು ಜಿಲ್ಲೆಯ ಬಿಜೆಪಿ ನಾಯಕರು ಸುಮಲತಾ ಅಂಬರೀಶ್ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ಮಂಡ್ಯ ಬಿಟ್ಟು ನನಗೆ ಬೇರೆ ಕಡೆ ಟಿಕೆಟ್ ನೀಡಿದ್ರೆ ರಾಜಕೀಯವೇ ಬೇಡ ಎಂದಿದ್ದಾರೆ. ಈ ಮೂಲಕ ಮಂಡ್ಯ ಬಿಜೆಪಿ ಟಿಕೆಟ್ ಬೇಕೆಂದು ಸಂದೇಶ ರವಾನಿಸಿದ್ದಾರೆ.


