ತುಮಕೂರು: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯು ಹಿರಿಯ ವಕೀಲರ ಬಳಿ ವೃತ್ತಿ ತರಬೇತಿ ಪಡೆಯುವ ಅವಧಿಯಲ್ಲಿ ಶಿಷ್ಯವೇತನ ನೀಡಲು ಕಾನೂನು ಪದವಿ ಉತ್ತೀರ್ಣರಾದ ಅರ್ಹ ಪರಿಶಿಷ್ಟ ಜಾತಿ/ವರ್ಗದವರಿಂದ ಆನ್ ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಇಲಾಖಾ ವೆಬ್ ಸೈಟ್ www.sw.kar.nic.in ನಲ್ಲಿ ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು 40 ವರ್ಷ ವಯೋಮಿತಿಯೊಳಗಿನವರಾಗಿದ್ದು, ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿರಬೇಕು. ಅಭ್ಯರ್ಥಿಯು 2 ವರ್ಷದೊಳಗಿನ ಅವಧಿಯಲ್ಲಿ ಕಾನೂನು ಪದವಿ ಪಡೆದಿರಬೇಕು ಹಾಗೂ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂ. ಮಿತಿಯೊಳಗಿರಬೇಕು.
ತರಬೇತಿಯು 2 ವರ್ಷಗಳ ಅವಧಿಯದ್ದಾಗಿರುತ್ತದೆ. ಒಮ್ಮೆ ತರಬೇತಿಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಮಧ್ಯೆ ತರಬೇತಿಯನ್ನು ಬಿಡಲು ಅವಕಾಶವಿರುವುದಿಲ್ಲ. ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಹೆಯಾನ 10,000 ರೂ.ಗಳ ಶಿಷ್ಯವೇತನ ನೀಡಲಾಗುವುದು. ಶಿಷ್ಯವೇತನವನ್ನು ಹಾಜರಾತಿ ಮತ್ತು ದಿನಚರಿ ಆಧಾರದ ಮೇಲೆ ಪಾವತಿಸಲಾಗುವುದು. ಅಭ್ಯರ್ಥಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಆಯ್ಕೆಯಾದಲ್ಲಿ ತರಬೇತಿ ಬಿಡಲು ನಿಯಮಗಳಲ್ಲಿ ಅವಕಾಶವಿರುತ್ತದೆ.
ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸರ್ಕಾರಿ ವಕೀಲರು/ಸರ್ಕಾರಿ ಅಭಿಯೋಜಕರು ಅಥವಾ 15 ವರ್ಷಗಳಿಗಿಂತ ಹೆಚ್ಚಿನ ಅವಧಿಯ ನ್ಯಾಯಾಲಯಗಳಲ್ಲಿ ವಾದ ಮಂಡಿಸಿದ ಖಾಸಗಿ ಕ್ರಿಮಿನಲ್/ಸಿವಿಲ್ ವಕೀಲರ ಬಳಿ ತರಬೇತಿಗೆ ನಿಯೋಜಿಸಲಾಗುವುದು. ತರಬೇತಿ ಅವಧಿಯ ಮಧ್ಯದಲ್ಲಿ ತರಬೇತಿ ಬಿಟ್ಟಲ್ಲಿ ಅಲ್ಲಿಯವರೆಗೆ ಪಾವತಿಸಲಾದ ಶಿಷ್ಯ ವೇತನವನ್ನು ಸರ್ಕಾರಕ್ಕೆ ಮರು ಪಾವತಿಸಬೇಕು. ತಪ್ಪಿದಲ್ಲಿ ಈ ಹಣಕ್ಕೆ ಶೇ.10ರಷ್ಟು ಬಡ್ಡಿ ವಿಧಿಸಿ ಕಂದಾಯ ರೂಪದಲ್ಲಿ ವಸೂಲಿ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು/ಆಯಾ ತಾಲ್ಲೂಕುಗಳ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q