ತುಮಕೂರು: ಭಾರತದಲ್ಲಿ ಜಾತಿ ವ್ಯವಸ್ಥೆ ಒಂದು ಮಾನಸಿಕ ರೋಗ. ಮನುಷ್ಯನ ದೇಹಕ್ಕೆ ರೋಗ ಅಂಟಿಕೊಂಡಂತೆ ಜಾತಿ ಅಂಟಿಕೊಂಡಿದೆ. ಬಾಲ್ಯದಲ್ಲಿ ಜಾತಿ ವ್ಯವಸ್ಥೆಯಿಂದ ನಲುಗಿದ ಬಾಬೂಜಿ, ಸಮಾಜದಲ್ಲಿದ್ದ ಜಾತಿ ವ್ಯವಸ್ಥೆಗೆ ಚಿಕಿತ್ಸೆ ನೀಡಿದರು ಎಂದು ಸಾಹಿತಿ ಡಾ. ಶಿವಣ್ಣ ತಿಮ್ಲಾಪುರ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಾ.ಬಾಬು ಜಗಜೀವನರಾಮ್ ಅಧ್ಯಯನ ಪೀಠವು ಸ್ನಾತಕೋತ್ತರ ಪ.ಜಾ./ಪ.ಪಂ.ಗಳ ಪುರುಷರ ವಿದ್ಯಾರ್ಥಿನಿಲಯದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನರಾಮ್ ಅವರ 118ನೇ ಜನ್ಮದಿನಾಚರಣೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಾಬೂಜಿ ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆಗಾಗಿ ಶ್ರಮಿಸಿದವರಲ್ಲಿ ಪ್ರಮುಖರು. ದಲಿತ ವರ್ಗದವರನ್ನು ಸಂಘಟಿಸಿ ಅಂಬೇಡ್ಕರ್ ರ ಜೊತೆಗೂಡಿ ಅಸ್ಪೃಶ್ಯತೆ ವಿರುದ್ಧ ಹೋರಾಡಿದರು. ಹಿಂದೂ ಧರ್ಮದಲ್ಲಿ ಇದ್ದುಕೊಂಡೇ ಅಲ್ಲಿನ ನ್ಯೂನತೆಗಳನ್ನು ತಿದ್ದಿದವರು ಎಂದರು.
ಬಾಬೂಜಿ ಪ್ರಧಾನಿಯಾಗುವ ಅರ್ಹತೆ ಹೊಂದಿದ್ದರೂ ಅದರಿಂದ ವಂಚಿತರಾದರು. ಅವರ ರಾಜಕೀಯ ಜೀವನ ಸುದೀರ್ಘವಾದದ್ದು. ತಮ್ಮ ರಾಜಕೀಯ ಅವಧಿಯಲ್ಲಿ ದೇಶಕ್ಕೆ ಅನೇಕ ಅನುಕೂಲ ಆಗುವಂತ ಕಾರ್ಯಗಳನ್ನು ಮಾಡಿದ್ದಾರೆ. ಇವರ ಬದುಕಿನ ಕುರಿತು ಪ್ರತಿಯೊಬ್ಬ ವಿದ್ಯಾರ್ಥಿ ಅಧ್ಯಯನ ಮಾಡಬೇಕು ಎಂದರು.
ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಬಾಲ್ಯದಲ್ಲೇ ಅನ್ಯಾಯದ ವಿರುದ್ಧ ಜಗಜೀವನ್ ರಾಮ್ ಸಿಡಿದೆದ್ದರು. ಕೃಷಿ, ರಕ್ಷಣಾ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಕಾರ್ಮಿಕರಿಗೆ ಅವರ ಹಕ್ಕುಗಳನ್ನು ದೊರಕಿಸಿ ಕೊಟ್ಟರು. ಇಂಥಹವರ ಆದರ್ಶಗಳು ಸಮಾಜದಲ್ಲಿ ಬಹುಮುಖ್ಯ ಎಂದರು.
ಡಾ. ಬಾಬು ಜಗಜೀವನರಾಮ್ ಅಧ್ಯಯನ ಪೀಠದ ಸಂಚಾಲಕ ಡಾ. ದ್ವಾರಕಾನಾಥ್ ವಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಉಪ ಗ್ರಂಥಪಾಲಕ ಮತ್ತು ವಿದ್ಯಾರ್ಥಿನಿಲಯದ ಪಾಲಕ ಡಾ. ಕುಮಾರ ಬಿ. ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4