ದೇಶಾದ್ಯಂತ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್ ಲಸಿಕೆಯನ್ನು ನೀಡುವ ಕಾರ್ಯ ಆರಂಭವಾಗಿದ್ದರೂ ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಕಡೆ ಬೂಸ್ಟರ್ ಡೋಸ್ ಲಸಿಕೆಗೆ ಹೆಚ್ಚಿನ ಆಸಕ್ತಿ ತೋರಿಲ್ಲ. ಕೊರೊನಾ ಸೋಂಕು ಪ್ರಕರಣಗಳು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚೆರಿಕೆ ಡೋಸ್ ಪಡೆಯಲು ಜನ ಹೆಚ್ಚಿನ ಉತ್ಸಾಹ ಕಂಡು ಬಂದಿಲ್ಲ. ಲಸಿಕಾ ಕೇಂದ್ರಗಳತ್ತ ಜನ ಬೂಸ್ಟರ್ ಡೋಸ್ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ.
ಕೋವಿಡ್ ನ 1 ಮತ್ತು 2ನೇ ಅಲೆ ಸಂದರ್ಭದಲ್ಲಿ ಲಸಿಕೆಗಾಗಿ ಲಸಿಕಾ ಕೇಂದ್ರಗಳಿಗೆ ಮುಗಿಬಿದ್ದು, ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದ ಜನ, ಬೂಸ್ಟರ್ ಡೋಸ್ ಲಸಿಕೆ ಬಗ್ಗೆ ಮಾತ್ರ ಅಷ್ಟೇನೂ ಉತ್ಸಾಹ ತೋರುತ್ತಿಲ್ಲ. ನೋಡೋಣ ಸರ್ಕಾರವೇ ಉಚಿತವಾಗಿ ಲಸಿಕೆ ಕೊಡಬಹುದು ಎಂಬ ನಿರೀಕ್ಷೆಯಲ್ಲಿ ಕೆಲವರಿದ್ದರೆ, ಇನ್ನೂ ಕೆಲವರು ಈಗ ಕೊರೊನಾ ಇಲ್ಲ, ಮುಂದೆ ಕೊರೊನಾ ಸೋಂಕು ಜಾಸ್ತಿಯಾದರೆ ಆಗ ಲಸಿಕೆ ಹಾಕಿಸಿಕೊಳ್ಳೋಣ ಎಂಬ ಮನಃಸ್ಥಿತಿಯಲ್ಲಿರುವುದು ಬೂಸ್ಟರ್ ಡೋಸ್ ಲಸಿಕೆಗೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿಲ್ಲ.
ಬೂಸ್ಟರ್ ಡೋಸ್ ಲಸಿಕೆಯನ್ನು ಖಾಸಗಿ ಲಸಿಕಾ ಕೇಂದ್ರಗಳಲ್ಲಿ ನೀಡಲಾಗುತ್ತಿದ್ದು, ಉಚಿತವಾಗಿ ಬೂಸ್ಟರ್ ಡೋಸ್ ಲಸಿಕೆ ನೀಡುತ್ತಿಲ್ಲ ಹಾಗಾಗಿಯೇ ಸಾಮಾನ್ಯ ಜನ ದುಡ್ಡು ಕೊಟ್ಟು ಲಸಿಕೆ ಹಾಕಿಸಿಕೊಳ್ಳಬೇಕೆ ಎಂಬ ಮನಃಸ್ಥಿತಿಯಲ್ಲಿದ್ದು, ಬೂಸ್ಟರ್ ಡೋಸ್ ಲಸಿಕೆ ನೀಡಿಕೆಗೆ ಮೊದಲ ದಿನ ಹೆಚ್ಚಿನ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಲಾಗಿದೆ.
ಕೊರೊನಾ ಮೊದಲನೇ ಮತ್ತು ೨ನೇ ಡೋಸ್ ಲಸಿಕೆಯನ್ನು ಸರ್ಕಾರ ಉಚಿತವಾಗಿ ನೀಡಿದಂತೆ ಬೂಸ್ಟರ್ ಡೋಸ್ನ್ನು ಉಚಿತವಾಗಿ ನೀಡಬಹುದು, ಅಲ್ಲಿಯವರೆಗೂ ಕಾಯೋಣ ದುಡ್ಡುಕೊಟ್ಟು ಲಸಿಕೆ ಹಾಕಿಸಿಕೊಳ್ಳುವುದು ಬೇಡ ಎಂಬ ಭಾವನೆಯಲ್ಲಿ ಕೆಲವರಿದ್ದಾರೆ. ಬೂಸ್ಟರ್ ಡೋಸ್ ನೀಡುವ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಇಂದು ಬಂದಿಲ್ಲ.ದೇಶದಲ್ಲಿ ಸದ್ಯ ಕೊರೊನಾ ಸೋಂಕು ಪ್ರಕರಣ ಇಳಿಕೆಯಾಗಿದೆ. ಕೊರೊನಾ ಮಾಯವಾಗಿದೆ ಎಂಬಂತಹ ಪರಿಸ್ಥಿತಿ ಇದೆ. ಜತೆಗೆ ಹಲವು ರಾಜ್ಯಗಳಲ್ಲಿ ಕಡ್ಡಾಯ ಮಾಸ್ಕ್ಗೂ ವಿನಾಯಿತಿ ನೀಡಲಾಗಿದೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಡ್ಡಾಯ ಮಾಸ್ಕ್ಗೆ ವಿನಾಯಿತಿ ಇರದಿದ್ದರೂ ಬಹುತೇಕ ಜನ ಮಾಸ್ಕ್ ಧರಿಸುವುದನ್ನೇ ಬಿಟ್ಟಿದ್ದಾರೆ. ಹೀಗಾಗಿ ಬೂಸ್ಟರ್ ಡೋಸ್ ಲಸಿಕೆಗೂ ಜನ ಹೆಚ್ಚಿನ ಆಸಕ್ತಿ ತೋರಿಲ್ಲ. ಹಾಗಾಗಿ, ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಬಹಳ ವಿರಳವೆನಿಸಿದೆ,
ಕೋವಿಡ್ನ ಮೊದಲನೇ ಮತ್ತು ಎರಡನೇ ಡೋಸ್ ಲಸಿಕೆಯನ್ನು ಸರ್ಕಾರ ಉಚಿತವಾಗಿ ಎಲ್ಲರಿಗೂ ನೀಡಿತ್ತು. ಆದರೆ, ಬೂಸ್ಟರ್ ಡೋಸ್ ಲಸಿಕೆಗೆ 225 ರೂ. ದರ ನಿಗದಿ ಮಾಡಿ ಜತೆಗೆ ಸೇವಾ ಶುಲ್ಕವನ್ನು 150 ರೂ. ಪಡೆಯಲು ಸರ್ಕಾರ ಅವಕಾಶ ನೀಡಿದೆ. ಹಾಗಾಗಿ, ಬೂಸ್ಟರ್ ಡೋಸ್ ಲಸಿಕೆ ಪಡೆಯಲು 475 ರೂ. ತೆರಬೇಕಾಗುತ್ತದೆ.ಜನ ಸಾಮಾನ್ಯರು ಇಷ್ಟೊಂದು ದುಡ್ಡು ನೀಡಿ ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಕೆಲವೇ ಕೆಲವು ಮಂದಿ ಮಾತ್ರ ಖಾಸಗಿ ಕೇಂದ್ರಗಳಲ್ಲಿ ದುಡ್ಡು ನೀಡಿ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ.
2ನೇ ಡೋಸ್ ಲಸಿಕೆ ಪಡೆದು 9 ತಿಂಗಳು ಪೂರ್ಣಗೊಂಡವರು ಮಾತ್ರ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಬೂಸ್ಟರ್ ಡೋಸ್ ಪಡೆಯಲು ಆನ್ ಲೈನ್ ನಲ್ಲಿ ಸಮಯ ನಿಗದಿ ಮಾಡಿ ಅಥವಾ ನೇರವಾಗಿ ಖಾಸಗಿ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಬಹುದಾಗಿದೆ.
ಕೋವಿಡ್ ಮುಂಚೂಣಿ ಕಾರ್ಯಕರ್ತರು ಮತ್ತು ೬೦ ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡುವುದು ಮುಂದುವರೆದಿದೆ. ೬೦ ವರ್ಷ ಕೆಳಗಿರುವವರು ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಬೂಸ್ಟರ್ ಡೋಸ್ ಲಸಿಕೆ ತೆಗೆದುಕೊಳ್ಳಬೇಕು.
ಮಕ್ಕಳಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮೊದಲನೇ ಡೋಸ್ ಹಾಗೂ ೨ನೇ ಡೋಸ್ ಲಸಿಕೆಯನ್ನು ಹಾಕಲಾಗುತ್ತಿದೆ. ರಾಜ್ಯದಲ್ಲಿ ೧೮ ವರ್ಷ ಮೇಲ್ಪಟ್ಟ ೪.೯೭ ಮಂದಿ ಮೊದಲ ಡೋಸ್ ಹಾಗೂ ೪.೭೬ ಕೋಟಿ ಮಂದಿ ೨ನೇ ಡೋಸ್ ಪಡೆದುಕೊಂಡಿದ್ದಾರೆ.೨ನೇ ಡೋಸ್ ಪಡೆದುಕೊಂಡಿರುವ ೪.೭೬ ಕೋಟಿ ಮಂದಿ ೨ನೇ ಡೋಸ್ ಪಡೆದು ೯ ತಿಂಗಳಾಗಿದ್ದರೆ, ಈಗ ಅವರು ಬೂಸ್ಟರ್ ಡೋಸ್ನ್ನು ಪಡೆಯಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5