ತುಮಕೂರು: ಕರ್ನಾಟಕ ಬಂಜಾರ (ಲಂಬಾಣಿ) ಜಾಗೃತಿ ದಳ(ರಿ), ವತಿಯಿಂದ ತುಮಕೂರು ನಗರದಲ್ಲಿ 2025ರ ಮಾರ್ಚ್ 02ನೇ ಭಾನುವಾರ ಬಂಜಾರ ಸಮುದಾಯದ ಆರಾಧ್ಯ ದೈವ ಶ್ರೀಸಂತ ಸೇವಾಲಾಲ್ ಮಹಾರಾಜ್ ಅವರ 286ನೇ ಜನ್ಮಜಯಂತಿ ಹಾಗೂ ಬಿಗ್ ಬಾಸ್ 11ರ ವಿಜೇತ ಹನುಮಂತ ಲಮಾಣಿ ರವರಿಗೆ ಅಭಿನಂದನಾ ಸಮಾರಂಭದ ಅಂಗವಾಗಿ ನಗರದ ಖಾಸಗಿ ಹೊಟೇಲ್ನಲ್ಲಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರರಾದ ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಬಾವಿ ಸಭೆ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಬಂಜಾರ(ಲಂಬಾಣಿ ) ಜಾಗೃತಿ ದಳ(ರಿ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ತಿಪ್ಪೇಸ್ವಾಮಿ ಸಂತ ಸೇವಾಲಾಲ್ ಮಹಾರಾಜ್ ಅವರ ಜೀವನ, ಸಾಧನೆಯನ್ನು ಸಮುದಾಯದ ಯುವಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಸಮುದಾಯದ ಹಿರಿಯ ಸರಕಾರದೊಂದಿಗೆ ಮಾರ್ಚ್ 02 ನೇ ಭಾನುವಾರ ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿರುವ ಬಂಜಾರ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ಬಿಗ್ಬಾಸ್ ಸೀಜನ್ 11 ರ ವಿಜೇತರಾದ ಬಂಜಾರ ಕಣ್ಮಣಿ ಝೀ ಟಿವಿಯ ಸರಿಗಮಪ ಮತ್ತಿತರ ರಿಯಾಲಿಟಿ ಷೋ ಗಳ ಮೂಲಕ ನಾಡಿನಾದ್ಯಂತ ಹೆಸರಾಗಿರುವ ಹನುಮಂತ ಲಮಾಣಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಇದರ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬಂಜಾರ ಸಮುದಾಯದ ಸಾಧಕರನ್ನು ಗುರುತಿಸಿ, ಅಭಿನಂದಿಸಲಾಗುವುದು ಎಂದರು.
ಶ್ರೀಸಂತ ಸೇವಾಲಾಲ್ ಅವರ 286 ನೇ ಜನ್ಮ ಜಯಂತಿ ಅಂಗವಾಗಿ ಮಾರ್ಚ್ 02ನೇ ಭಾನುವಾರ ಬೆಳಗ್ಗೆ 10:30 ಗಂಟೆಗೆ ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಬಂಜಾರ ಭವನದವರೆಗೆ ಹಂಸರಥದಲ್ಲಿ ಸೇವಾಲಾಲ್ ಮಹಾರಾಜರ ಭಾವಚಿತ್ರದ ಅದ್ದೂರಿ ಮೆರವಣಿಗೆಯನ್ನು ಬಂಜಾರ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಲೆಗಳ ಪ್ರದರ್ಶನದೊಂದಿಗೆ ನಡೆಸಲಾಗುವುದು.ಬಂಜಾರ ಭವನದಲ್ಲಿ ಬೆಳಗ್ಗೆ 12 ಗಂಟೆಗೆ ಅಭಿನಂದನಾ ಸಮಾರಂಭ ಜರಗಲಿದೆ.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಾಧ್ಯಕ್ಷರಾದ ತೋಳಚನಾಯ್ಕ್, ಬಂಜಾರ ಜಾಗೃತಿ ದಳ ರಾಜ್ಯ ಪದಾಧಿಕಾರಿಗಳು ಹಾಗೂ ತುಮಕೂರಿನ ಖ್ಯಾತ ಉದ್ಯಮಿಗಳಾದ ರಮೇಶ್ ನಾಯ್ಕ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಪ್ಪೇಸ್ವಾಮಿ ನಾಯ್ಕ ತಿಳಿಸಿದರು.
ಕರ್ನಾಟಕ ಬಂಜಾರ(ಲಂಬಾಣಿ ) ಜಾಗೃತಿ ದಳ ಜಿಲ್ಲಾಧ್ಯಕ್ಷ ಶಿವಾನಂದ ರಾಥೋಡ್ ಮಾತನಾಡಿ,ಬಂಜಾರ ಸಮುದಾಯವನ್ನು ಎಲ್ಲಾ ರೀತಿಯಿಂದಲೂ ಸಂಘಟಿಸುವ ಉದ್ದೇಶದಿಂದ ಈ ಸಮಾರಂಭವನ್ನು ಆಯೋಜಿಸಲಾಗಿದೆ.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಅರ್ಥಿಕವಾಗಿ, ರಾಜಕೀಯವಾಗಿ ಸಮುದಾಯ ಮುಂದೆ ಬರಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸಮುದಾಯದ ಮುಖಂಡರಾದ ರಮೇಶ್ ನಾಯ್ಕ, ಧನಂಜಯನಾಯ್ಕ್ ಅವರುಗಳು ಮಾರ್ಚ್ 02ನೇ ತಾರೀಕು ಕಾರ್ಯಕ್ರಮದಲ್ಲಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಬಂಜಾರ(ಲಂಬಾಣಿ)ಜಾಗೃತಿ ದಳದ ಪದಾಧಿಕಾರಿಗಳಾದ ಶಾಂತರಾಜ್ ನಾಯ್ಕ, ಮೌನೇಶ್ ರಾಥೋಡ್, ಜಿಲ್ಲಾ ಸಂಚಾಲಕರಾದ ನಾರಾಯಣನಾಯ್ಕ, ಅಂಜಿ ನಾಯ್ಕ, ದೀಕ್ಷಿತ್, ಕೀರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ನಂದೀಶ್ ನಾಯ್ಕ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4