ಕೊರಟಗೆರೆ: ಪ್ರಧಾನಿ ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡದೆ, ಅದಾನಿ, ಅಂಬಾನಿಯವರಂತಹ ಶ್ರೀಮಂತರ ಸಾಲ ಮನ್ನಾ ಮಾಡ್ತಾರೆ. ಈ ದೇಶದ ರೈತರು ಮೋದಿ ಅವರ ಕಣ್ಣಿಗೆ ಕಾಣಲ್ಲ ಎಂದು ಬಿಜೆಪಿ ಪಕ್ಷದ ವಿರುದ್ಧ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಪುರವರ, ವಡ್ಡಗೆರೆ, ಹೊಳವನಹಳ್ಳಿ, ಕೋಳಾಲ, ತೋವಿನಕೆರೆ ಸೇರಿದಂತೆ ಕೋರ ಹೋಬಳಿಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡರ ಪರ ಪ್ರಚಾರ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಣ್ಣ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಸರಿಯಾದ ಕ್ಷೇತ್ರ ಸಿಗದೇ ರಾಜ್ಯಾದ್ಯಂತ ಓಡಾಡುತ್ತಿದ್ದಾರೆ. ಆದರೆ ಮುದ್ದಹನುಮೇಗೌಡರು ಇಲ್ಲೇ ಹುಟ್ಟಿ ಬೆಳೆದು ನ್ಯಾಯಾಧೀಶರಾಗಿ ಕೆಲಸ ಮಾಡಿ, ನಿಮ್ಮಗಳ ಸೇವೆ ಮಾಡುತ್ತಿದ್ದಾರೆ. ಈ ಹಿಂದೆ ಮುದ್ದ ಹನುಮೇಗೌಡರಿಗೆ 35,000 ಮತಗಳ ಅಂತರದಿಂದ ಗೆಲ್ಲಿಸಿದ್ರಿ. ತುಮಕೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಮುದ್ದಹನುಮೇಗೌಡರನ್ನು ಮತ್ತೊಮ್ಮೆ ಗೆಲ್ಲಿಸಬೇಕಾಗಿದೆ.
ಲೋಕಸಭೆಯಲ್ಲಿ 5 ಬಾರಿ ಗೆದ್ದಂತಹ ಜಿಎಸ್ ಬಸವರಾಜು ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನೀವು ಮಾಡಿದಂತಹ ಕೆಲಸ ಒಂದಾದರೂ ತೋರಿಸಿ. ಇಡೀ ಜಿಲ್ಲೆಯಲ್ಲಿ ನಿಮ್ಮ ಕೆಲಸ ಶೂನ್ಯವಾಗಿದೆ. ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯನ ಕಡೆಯವರು ಸೋಮಣ್ಣಗೆ ಮಣ್ಣು ಮುಕ್ಕಿಸಿದ್ದಾರೆ. ಬಿಜೆಪಿಯವರೇ ತುಮಕೂರಿನಲ್ಲಿ ಬಲಿಪಶು ಮಾಡಲು ಹೊರಟಿದ್ದಾರೆ. ನಮ್ಮ ರೈತರು ಬೆಳೆದ ಬೆಳೆಗಳಿಗೆ ಕೇಂದ್ರ ಸರ್ಕಾರ ಸರಿಯಾದ ಬೆಂಬಲ ಬೆಲೆ ನೀಡುತ್ತಿಲ್ಲ. ಒಂದು ವರ್ಷದಲ್ಲಿ ಎರಡು ಕೋಟಿ ಉದ್ಯೋಗ ಕೊಡ್ತೀವಿ ಅಂತ ಹೇಳಿದ್ರು. ಕೇಂದ್ರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಕೂಡ ಅದನ್ನು ಭರ್ತಿ ಮಾಡುತ್ತಿಲ್ಲ. ಮುದ್ದ ಹನುಮೇಗೌಡರು ಲೋಕಸಭಾ ಸದಸ್ಯನಾಗಿದ್ದಂತಹ ಸಂದರ್ಭದಲ್ಲಿ ಕೊಬ್ಬರಿ, ರೈಲ್ವೆ ನೀರಾವರಿ ಸೇರಿದಂತೆ ಸಾಕಷ್ಟು ಯೋಜನೆಗಳ ಬಗ್ಗೆ ಸಂಸತ್ ನಲ್ಲಿ ಧ್ವನಿ ಎತ್ತಿದ್ದಾರೆ. ಅವರು ಗೆದ್ದರೆ ನೆನೆಗುದಿಗೆ ಬಿದ್ದಿರುವ ಇನ್ನೂ ಹಲವಾರು ಅಭಿವೃದ್ಧಿ ಯೋಜನೆಯನ್ನು ಮರು ಪ್ರಾರಂಭ ಮಾಡ್ತಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುದ್ದ ಹನುಮೇಗೌಡ ಗೌಡರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುದ್ದೆ ಹನುಮೇಗೌಡ ಮಾತನಾಡಿ, ನಾನು ಸಂಸದನಾಗಿದ್ದಂತಹ ಕಾಲದಲ್ಲಿ ತುಮಕೂರಿನಿಂದ ರಾಯದುರ್ಗಕ್ಕೆ ರೈಲ್ವೆ ಯೋಜನೆ, ನೀರಾವರಿ, ಕೊಬ್ಬರಿಗೆ ಬೆಂಬಲ ಬೆಲೆ ಸೇರಿದಂತೆ 3200 ಕೋಟಿ ವೆಚ್ಚದ ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡಿಸಿದ್ದು. ಇದರಿಂದ ಜಿಲ್ಲೆಯ ಆರು ತಾಲೂಕಿಗಳಿಗೆ ಅನುಕೂಲವಾಗಲಿದೆ. ಈಗಿನ ಸಂಸದರು ನಮ್ಮ ಜಿಲ್ಲೆ ಮತ್ತು ತಾಲೂಕಿನ ಬಗ್ಗೆ ಒಂದು ದಿನವೂ ಕೂಡ ಮಾತಾಡಿದ್ದನ್ನು ನಾನು ನೋಡಲೇ ಇಲ್ಲ, ನೀವು ಮಾಡಿರುವ ಕೆಲಸದ ಯಾವುದಾದರೂ ಒಂದು ಸಾಕ್ಷಿ ಗುಡ್ಡೆ ತೋರಿಸಿ ಎಂದು ಬಸವರಾಜು ವಿರುದ್ಧ ಕಿಡಿಕಾರಿದರು.
ಬಿಜೆಪಿ ಅಭ್ಯರ್ಥಿ ಸೋಮಣ್ಣನವರಿಗೆ ಚುನಾವಣೆಗೆ ಸ್ಪರ್ಧಿಸಲು ಬೇರೆ ಯಾವುದೇ ಕ್ಷೇತ್ರ ಸಿಗಲಿಲ್ಲ ಎಂಬಂತಿದೆ ಆದ್ದರಿಂದ ಅವರು ತುಮಕೂರಿಗೆ ಬಂದಿದ್ದಾರೆ. ಸೋಮಣ್ಣನಿಗೂ ತುಮಕೂರಿಗೂ ಯಾವ ಸಂಬಂಧವೂ ಇಲ್ಲ ತುಮಕೂರಿಗೆ ಅವರ ಕೊಡುಗೆ ಏನು.? ಸಮ್ಮಿಶ್ರ ಸರ್ಕಾರ ಇದ್ದಾಗ ಲೋಕಸಭಾ ಅಭ್ಯರ್ಥಿಯಾಗಿದ್ದ ದೇವೇಗೌಡರ ಗೆಲುವಿಗಾಗಿ ನಾನು ಕೂಡ ಶ್ರಮಿಸಿದ್ದೆ.ಅವರು ಸೋಲುವುದಕ್ಕೆ ನಾವ್ಯಾರೂ ಕಾರಣರಲ್ಲ ನಾನು ದೇವೇಗೌಡರ ಬಗ್ಗೆ ಎಲ್ಲಿಯೂ ಅಪಪ್ರಚಾರ ಮಾಡಿಲ್ಲ. ಬೇಕಿಲ್ಲದ ವಿಚಾರಗಳಿಗೆ ಕಿವಿ ಕೊಡಬೇಡಿ ನಾನು ಲೋಕಸಭಾ ಸದಸ್ಯನಾಗಿದ್ದಂತಹ ಸಂದರ್ಭದಲ್ಲಿ ಜಿಲ್ಲಾಧ್ಯಂತ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಇನ್ನು ಮುಂದೆಯೂ ಸಹ ನಿಮ್ಮ ಜೊತೆಗಿದ್ದು ಉತ್ತಮ ರೀತಿಯ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡ್ತೀನಿ ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಹೀಗಾಗಿ ನನಗೆ ಮತ್ತೊಂದು ಬಾರಿ ಆಶೀರ್ವಾದ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ, ಮಾಜಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ್ ಹಾಲಪ್ಪ, ಕೆಪಿಸಿಸಿ ಸದಸ್ಯ ದಿನೇಶ್, ಎಂ ಎನ್ ಜೆ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವಥ್ ನಾರಾಯಣ್, ಅರಕೆರೆ ಶಂಕರ್, ಮಹಿಳಾ ಘಟಕದ ಅಧ್ಯಕ್ಷ ಜಯಮ್ಮ, ಜಿ ಪಂ ಮಾಜಿ ಸದಸ್ಯ ನಾರಾಯಣ ಮೂರ್ತಿ, ಪ ಪಂ ಸದಸ್ಯ ಎ ಡಿ ಬಲರಾಮಯ್ಯ, ಮುಖಂಡರುಗಳಾದ ವಾಲೆ ಚಂದ್ರಯ್ಯ, ಮೈಲಾರಪ್ಪ, ಮಹಾಲಿಂಗಪ್ಪ, ನಾಗಭೂಷಣ್, ಎಲ್ಐಸಿ ರಾಜಣ್ಣ, ಜಯರಾಮಣ್ಣ, ಕವಿತಾ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ ಎನ್ ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296