ತುಮಕೂರು: ಇತಿಹಾಸ ಪ್ರಸಿದ್ಧ ದೇವರಾಯನ ದುರ್ಗ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಮಾರ್ಚ್ 13ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಕರಿಗಿರಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆಯು ಮಾರ್ಚ್ 6 ರಿಂದ ಮಾರ್ಚ್ 18ರವರೆಗೆ ನಡೆಯಲಿದ್ದು, ಜಾತ್ರೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಜಾತ್ರೆ ಅಂಗವಾಗಿ ಮಾ. 6ರಂದು ಸಂಜೆ 7 ಗಂಟೆಗೆ ಅಂಕುರಾರ್ಪಣ, ಮಾ. 7ರಂದು ಸಂಜೆ 7.30ಕ್ಕೆ ಧ್ವಜಾರೋಹಣ, ಮಾ. 8ರಂದು ಸಂಜೆ 7ಕ್ಕೆ ಶೇಷವಾಹನೋತ್ಸವ, ಮಾ.9ರಂದು ಸಂಜೆ 7ಕ್ಕೆ ಸಿಂಹಾರೋಹಣ, ಮಾ.10ರಂದು ಬೆಳಿಗ್ಗೆ 7 ಗಂಟೆಗೆ ಪುಷ್ಪರಥ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ರಥೋತ್ಸವದ ಅಂಗವಾಗಿ ಮಾ.11ರಂದು ಸಂಜೆ 6ಕ್ಕೆ ಪ್ರಹ್ಲಾದೋತ್ಸವ, ರಾತ್ರಿ 12ಗಂಟೆಗೆ ರಾಮಾನುಜಕೂಟ ಸೇವೆ ಹಾಗೂ 12.30ಕ್ಕೆ ಕಲ್ಯಾಣೋತ್ಸವ; ಮಾ.12ರಂದು ಮಧ್ಯಾಹ್ನ 12ಕ್ಕೆ ದೊಡ್ಡಗರುಡವಾಹನ, ಸಂಜೆ 5ಕ್ಕೆ ಗಜೇಂದ್ರ ಮೋಕ್ಷ, ಸಂಜೆ 6ಕ್ಕೆ ನವಿಲು ವಾಹನೋತ್ಸವ ಹಾಗೂ ಸಂಜೆ 7ಕ್ಕೆ ಮುತ್ತಿನ ಪಲ್ಲಕ್ಕಿ ಉತ್ಸವ; ಮಾ. 13ರಂದು ಬೆಳಿಗ್ಗೆ 8 ಗಂಟೆಗೆ ಯಾತ್ರಾದಾನ, ಮಧ್ಯಾಹ್ನ 1 ಗಂಟೆಗೆ ಬ್ರಹ್ಮರಥೋತ್ಸವ; ಮಾ.14ರಂದು ಮಧ್ಯಾಹ್ನ 12ಕ್ಕೆ ಸೂರ್ಯಮಂಡಲೋತ್ಸವ, ರಾತ್ರಿ 8 ಗಂಟೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವ, ರಾತ್ರಿ 10ಕ್ಕೆ ಅಶ್ವವಾಹನೋತ್ಸವ; ಮಾ.15ರಂದು ಬೆಳಿಗ್ಗೆ 11ಕ್ಕೆ ತೀರ್ಥಸ್ನಾನ(ಹಸ್ತ ನಕ್ಷತ್ರದಲ್ಲಿ), ಮಾ.16ರಂದು ರಾತ್ರಿ 9ಕ್ಕೆ ದವನೋತ್ಸವ, ಮಾ.17 ಬೆಳಿಗ್ಗೆ 9.30ಕ್ಕೆ ಉಯ್ಯಾಲೋತ್ಸವ, 10.30ಕ್ಕೆ ಕುಂಭಿ ಬೆಟ್ಟದಲ್ಲಿ(ಪ್ರಾಕಾರೋತ್ಸವ); ಮಾ.18ರಂದು ಬೆಳಿಗ್ಗೆ 9.30ಕ್ಕೆ ಮಹಾಭಿಷೇಕ ಹಾಗೂ ಮಧ್ಯಾಹ್ನ 12ಕ್ಕೆ ಗರುಡೋತ್ಸವ ಕಾರ್ಯಕ್ರಮಗಳು ಜರುಗಲಿವೆ.
ರಥೋತ್ಸವ ದಿನ ಹೊರತುಪಡಿಸಿ ಜಾತ್ರಾ ದಿನಗಳಂದು ಪ್ರತಿ ದಿನ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಹಾಗೂ ರಥೋತ್ಸವ ದಿನದಂದು ಮಾತ್ರ ಮುಂಜಾನೆ 4 ಗಂಟೆಗೆ ಶ್ರೀ ಸ್ವಾಮಿಗೆ ಅಭಿಷೇಕ ನಡೆಯುತ್ತದೆ. ಭಕ್ತಾದಿಗಳು ಮತ್ತು ಸೇವಾಕರ್ತರು 200 ರೂ.ಗಳ ರಸೀದಿ ಪಡೆದು (ಇಬ್ಬರಿಗೆ ಮಾತ್ರ) ಅಭಿಷೇಕದಲ್ಲಿ ಭಾಗವಹಿಸಬಹುದಾಗಿದೆ.
ಜಾತ್ರೆ ವಿಶೇಷ ಸಂದರ್ಭದಲ್ಲಿ ಭಕ್ತಾದಿಗಳಿಗಾಗಿ ಬೆಂಗಳೂರು ಮತ್ತು ತುಮಕೂರಿನಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. “ಬ್ರಹ್ಮೋತ್ಸವ” ದಿನದಂದು ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್ ಎಸ್.ಟಿ. ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4