ತುರುವೇಕೆರೆ: ಹೇಮಾವತಿ ನಾಲೆಯ ಲಿಂಕ್ ಕೆನಾಲ್ ಎಕ್ಸ್ ಪ್ರೆಸ್ ಲೈನ್ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಕೊಡದೆ ಏಕಾಏಕಿ ಸರ್ಕಾರದವರು ಕಾಮಗಾರಿಯನ್ನು ಪ್ರಾರಂಭ ಮಾಡಿದ್ದಾರೆ” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತುರುವೇಕೆರೆ ತಾಲೂಕು ಅಧ್ಯಕ್ಷ ತಾಳ್ಕೆರೆ ನಾಗೇಂದ್ರ ನೇರ ಆರೋಪ ಮಾಡಿದ್ದಾರೆ.
ಪಟ್ಟಣದ ಹೇಮಾವತಿ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮುದ್ದಹನುಮೇಗೌಡರು, “ಯಾವುದೇ ಕಾಮಗಾರಿ ನಡೆದಿಲ್ಲ. ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಶಂಕು ಸ್ಥಾಪನೆ ಮಾಡಿದ ತಕ್ಷಣ ಅದು ಜಾರಿಯಾಗುವುದಿಲ್ಲ ಪೈಪ್ ಗಳ ಮೂಲಕ ಭೂಮಿಯಲ್ಲಿ ನೀರು ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಿರುವುದನ್ನು ನಾವು ಒಪ್ಪುವುದಿಲ್ಲ. ಅವರು ಜಿಲ್ಲೆಯ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಈ ಕಾಮಗಾರಿಯ ಬಗ್ಗೆ ಅವರಿಗೆ ಮಾಹಿತಿ ಇಲ್ಲವಾ? ಜಿಲ್ಲೆಯ ರೈತರ ಬಗ್ಗೆ ಹಾಗೂ ಕುಡಿಯುವ ನೀರಿನ ಬಗ್ಗೆ ಇವರಿಗೆ ಕಾಳಜಿ ಹಾಗೂ ಸ್ಪಷ್ಟತೆಯಿಲ್ಲ. ರಾಜಕಾರಣಿಗಳು ಜಿಲ್ಲೆಯ ರೈತರನ್ನು ಅಧೋಗತಿಗೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕಾಮಗಾರಿ ನಡೆದಿರುವುದು ಸತ್ಯ. ನಾನು ಇದನ್ನು ಮಾಡಲು ಬಿಡುವುದಿಲ್ಲ ಎಂದು ಚುನಾವಣಾ ಪ್ರಚಾರ ಸಮಯದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಇವರು ತಮ್ಮ ಪಕ್ಷದ ಹೈಕಮಾಂಡ್ ಹಾಗೂ ನಾಯಕರುಗಳ ವಿರೋಧವನ್ನು ಕಟ್ಟಿಕೊಂಡು ಕೆಲಸಮಾಡುತ್ತಾರಾ? ಎಂದು ನಾಗೇಂದ್ರ ಪ್ರಶ್ನಿಸಿದರು.
ಗುಬ್ಬಿ ತಾಲೂಕಿನ ಸುಂಕಪುರ ದಿಂದ ಕುಣಿಗಲ್ ಮಾಗಡಿ ರಾಮನಗರಕ್ಕೆ, ಹೇಮಾವತಿ ನೀರು ಹರಿಸುವ ಸಲುವಾಗಿ ಬಹಳ ವರ್ಷಗಳಿಂದ ಪ್ರಯತ್ನ ಮಾಡಿದ್ದಾರೆ. ಕಳೆದ ಬಾರಿ ಇಡೀ ಕಾಮಗಾರಿಯನ್ನು ಸಿದ್ದರಾಮಯ್ಯನವರ ಸರ್ಕಾರ ಕೈಗೆತ್ತಿಕೊಂಡಿತ್ತು. ಆದರೆ ಸರ್ಕಾರ ಬಿದ್ದುಹೋದ ಪರಿಣಾಮ ಮತ್ತು ಬಿ.ಜೆ.ಪಿ ಸರ್ಕಾರ ಬಂದಮೇಲೆ ಅದನ್ನು ಸಚಿವರಾಗಿದ್ದ ಮಾಧುಸ್ವಾಮಿಯವರು ಅದನ್ನು ರದ್ದು ಗೊಳಿಸಿದ್ದರು. ಮತ್ತೆ ಕಾಂಗ್ರೆಸ್ ಸರ್ಕಾರ ಅದನ್ನು ಕೈಗೆತ್ತಿಕೊಂಡು ಕಾಮಗಾರಿಯನ್ನು ಪ್ರಾರಂಭಿಸಿದೆ. ಈ ಲಿಂಕ್ ಕೆನಾಲ್ ಕಾಮಗಾರಿ ಮುಗಿದರೆ, ನಮ್ಮ ಗುಬ್ಬಿ, ತುಮಕೂರು ನಗರ & ಗ್ರಾಮಾಂತರ, ಸಿರಾ ಮತ್ತು ಮಧುಗಿರಿ ಭಾಗದ ರೈತಾಪಿ ವರ್ಗಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಎಲ್ಲಾ ರೈತ ಬಾಂಧವರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಈ ಲಿಂಕ್ ಕೆನಾಲ್ ಯೋಜನೆ ವಿರೋಧಿಸದೆ ಹೋದರೆ ಮುಂದಿನ ಭವಿಷ್ಯ ಅದೋಗತಿ ಎಂದು ಅವರು ಎಚ್ಚರಿಸಿದರು.
ಇಂತಹ ರಾಜಕಾರಣಿಗಳ ಮಾತುಗಳನ್ನು ನಂಬಬೇಡಿ ಎಂದು ಜನರಲ್ಲಿ ಮನವಿ ಮಾಡಿದರು. ರೈತರ ಜೊತೆ ಚೆಲ್ಲಾಟವಾಡಬೇಡಿ. ವಾಸ್ತವವೇನೆಂದರೆ ಹೇಮಾವತಿ ಅಚ್ಚುಕಟ್ಟ ಪ್ರದೇಶ ಇರುವುದು 11,26,000 ಹೆಕ್ಟರ್ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಧನಂಜಯ್, ಸಮಾಜ ಸೇವಕರಾದ ಹೆಡಗಿಯಲ್ಲಿ ವಿಶ್ವನಾಥ್, ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮಯ್ಯ , ದಂಡಿನ ಶಿವರ ಹೋಬಳಿಯ ಅಧ್ಯಕ್ಷ ನಾಗರಾಜ್, ರೈತಮುಖಂಡರುಗಳಾದ ಗಂಗಾಧರಯ್ಯ, ರಾಜಶೇಖರ್ ಸೇರಿದಂತೆ ಹಲವಾರು ರೈತರು ಹಾಜರಿದ್ದರು.
ವರದಿ: ಸುರೇಶ ಬಾಬು ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296