ತುಮಕೂರು: ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರಿನ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ ಹಾಗೂ ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟದ ಸಹಯೋಗದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 2ರವರೆಗೆ ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ರೈತ ಉತ್ಪಾದಕ ಸಂಸ್ಥೆ(ಎಫ್.ಪಿ.ಓ.)ಗಳ ಮೇಳವನ್ನು ಆಯೋಜಿಸಲಾಗಿದೆ.
ಮೇಳವನ್ನು ಅಂದು ಬೆಳಿಗ್ಗೆ 10:30 ಗಂಟೆಗೆ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಉದ್ಘಾಟಿಸಲಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆವಹಿಸಲಿದ್ದಾರೆ.
ರೈತರನ್ನು ಒಟ್ಟುಗೂಡಿಸಿ ಅವರ ಉತ್ಪಾದನೆ ಹಾಗೂ ಮಾರುಕಟ್ಟೆ ಸಾಮರ್ಥ್ಯವನ್ನು ವೃದ್ಧಿಸಲು ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸುವುದು ಸೂಕ್ತವೆಂದು ಪರಿಗಣಿಸಿ ಮೇಳವನ್ನು ಆಯೋಜಿಸಲಾಗಿದೆ.
ಮೇಳದಲ್ಲಿ ಭಾರತ ಸರ್ಕಾರವು 2013ರಲ್ಲಿ 1956ರ ಕಂಪನಿ ಕಾಯ್ದೆಗೆ ತಿದ್ದುಪಡಿ ತಂದು ಕಂಪನಿ ಕಾಯ್ದೆಯಡಿ ರೈತ ಉತ್ಪಾದಕರ ಸಂಸ್ಥೆಗಳನ್ನು ನೋಂದಾಯಿಸಲು ಅವಕಾಶ ನೀಡಲಾಗಿದೆ. ರೈತ ಉತ್ಪಾದಕರ ಸಂಸ್ಥೆಯು ಪ್ರಾಥಮಿಕ ಸಂಸ್ಥೆಯಾಗಿದ್ದು, ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಂಡ ಸದಸ್ಯ ರೈತರಿಗೆ ತಾಂತ್ರಿಕ ಸಲಹೆ, ಸಾಮರ್ಥ್ಯ ಬಲವರ್ಧನೆ, ಉತ್ತಮ ಗುಣಮಟ್ಟದ ಪರಿಕರಗಳನ್ನು ಪೂರೈಸುವುದು, ಬೆಳೆದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮುಖಾಂತರ ನೇರ ಮಾರುಕಟ್ಟೆ ಕಲ್ಪಿಸಿ ರೈತರನ್ನು ಹೆಚ್ಚು ಸಬಲರನ್ನಾಗಿ ಮಾಡುವುದು ಮತ್ತು ರೈತರ ಆರ್ಥಿಕ ಮಟ್ಟವನ್ನು ಬಲಪಡಿಸುವುದು ಮೇಳದ ಉದ್ದೇಶವಾಗಿದೆ.
ಮೇಳದಲ್ಲಿ ಸರಿಸುಮಾರು 15,000 ರೈತರು, ಉದ್ಯಮಿಗಳು ಹಾಗೂ ಹಿತಾಸಕ್ತರು ಭಾಗವಹಿಸಲಿದ್ದು, ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಾಪನೆಗೊಂಡಿರುವ 100ಕ್ಕೂ ಹೆಚ್ಚು ಎಫ್.ಪಿ.ಓ.ಗಳು ಮಳಿಗೆಗಳನ್ನು ತೆರೆಯಲಿದ್ದು, ವಿವಿಧ ಸಂಸ್ಥೆಯ ಉತ್ಪನ್ನಗಳ ವಸ್ತು ಪ್ರದರ್ಶನ ಮಾಡಲಿದ್ದಾರೆ.
ಸುಮಾರು 400-500ಕ್ಕೂ ಹೆಚ್ಚಿನ ಎಫ್.ಪಿ.ಓ.ಗಳ ಸದಸ್ಯರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೇಳದ ಪ್ರಯೋಜನ ಪಡೆಯಲಿದ್ದು, ಮೇಳದಲ್ಲಿ ವಿವಿಧ ವಿಚಾರಗೋಷ್ಠಿಗಳನ್ನು ನಡೆಸಲಾಗುವುದು.
ರೈತ ಉತ್ಪಾದಕರ ಸಂಸ್ಥೆಗಳ ಧ್ಯೇಯ, ದೂರದೃಷ್ಟಿ, ಅವಕಾಶಗಳು, ತೊಡಕುಗಳು, ಸಾಮರ್ಥ್ಯ ಬಲವರ್ಧನೆ, ಕಾನೂನು ಅನುಸರಣೆ, ಮಾರಾಟ ಮಾಡುವವರ ಮತ್ತು ಖರೀದಿಸುವವರ ಸಮಾವೇಶ, ಇನ್ನಿತರೆ ವಿಷಯಗಳ ಬಗ್ಗೆ ಚಿಂತನ–ಮಂಥನ ಸಭೆಯೊಂದಿಗೆ ರೈತರು ಹಾಗೂ ಉದ್ಯಮಿಗಳಿಗೆ ಅನುಕೂಲವಾಗುವಂತೆ ಈ ಮೇಳವನ್ನು ಆಯೋಜಿಸಲಾಗಿದೆ.
ರೈತ ಉತ್ಪಾದಕರ ಕಂಪನಿಗಳ ಸದಸ್ಯರು, ರೈತ ಬಾಂಧವರು, ರೈತೋದ್ಯಮಿಗಳು, ಆಸಕ್ತ ನಾಗರಿಕರು ಈ ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯುವುದರೊಂದಿಗೆ ಮೇಳವನ್ನು ಯಶಸ್ವಿಗೊಳಿಸಬೇಕೆಂದು ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ನಿರ್ದೆಶಕ ಡಾ.ರಾಘವೇಂದ್ರ ಕೆ. ಮಾಸ್ತ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4