ತುಮಕೂರು: ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯು ಶೇ. 100.63ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ. ಈ ಸಾಧನೆ ಮಾಡಿರುವ ತುಮಕೂರು ಜಿಲ್ಲೆಯನ್ನು ಅಭಿನಂದಿಸಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರಾದ ಶಿಲ್ಪಾ ನಾಗ್ ಪತ್ರ ಬರೆದಿದ್ದಾರೆ.
ಅಧಿಕಾರಿಗಳಿಗೆ ಸಿಇಒ ಪ್ರಶಂಸೆ : ಇಲಾಖೆಯ ಅಧಿಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಕ ಅಧಿಕಾರಿ ಅಶ್ವಿಜ ಬಿ.ವಿ., ರೈತರ ಜಾನುವಾರುಗಳಿಗೆ ಲಸಿಕಾ ಅಭಿಯಾನದ ಪ್ರಗತಿಯಲ್ಲಿ ತುಮಕೂರು ಜಿಲ್ಲೆಯು ಪ್ರಥಮ ಸ್ಥಾನ ಪಡೆದಿರುವುದು ನಮಗೆಲ್ಲ ಸಂತಸ ತಂದಿದೆ. ಇದರ ಜೊತೆಗೆ ಅಧಿಕಾರಿಗಳಿಗೆ ಜವಾಬ್ದಾರಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸರ್ಕಾರದ ಸೇವೆಗಳನ್ನು ಸಲ್ಲಿಸೋಣ ಎಂದರು.
ತುಮಕೂರು ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರಿಗೆ ಅಭಿನಂದನಾ ಪತ್ರ ಬರೆದಿರುವ ಶಿಲ್ಪಾ ನಾಗ್ ಅವರು ಅಭಿನಂದನಾ ಪತ್ರದಲ್ಲಿ ಒಂಬತ್ತನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದ ಅಭಿಯಾನವನ್ನು ದಿನಾಂಕ: 23.04.2026ರಂದು ಆರಂಭಿಸಿದಾಗ, ನಮ್ಮೆಲ್ಲರ ಮುಂದೆ ಇದ್ದ ಗುರಿ ಅತ್ಯಂತ ಕಠಿಣ, ಗುರಿ ಸಾಧಿಸಲು ಸಾಗಬೇಕಾದ ಹಾದಿ, ಹಲವಾರು ಅಡೆತಡೆಗಳನ್ನೊಳಗೊಂಡ ದುರ್ಗಮ ದಾರಿ ಎಂಬುವುದು ನಮ್ಮೆಲ್ಲರಿಗೂ ತಿಳಿದಂತ ವಿಚಾರವಾಗಿತ್ತು. ಆದರೆ ನಮ್ಮ ರೈತರ ರಾಸುಗಳ ಆರೋಗ್ಯ ರಕ್ಷಣೆ, ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವುದು ಹಾಗೂ ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಲುಬಾಯಿ ರೋಗವನ್ನು ನಿಯಂತ್ರಿಸಬೇಕೆಂಬ ಛಲ ನಮ್ಮೆಲ್ಲರಲ್ಲಿಯೂ ತುಂಬಿತ್ತು.
ನಡೆಯುವ ಹಾದಿಯಲ್ಲಿ ಎಷ್ಟೇ ಅಡೆತಡೆಗಳಿದ್ದರೂ, ಗುರಿಯನ್ನು ತಲುಪಬೇಕೆಂದು ದೃಢ ವಿಶ್ವಾಸ, ನಮ್ಮ ತಂಡದ ಎಲ್ಲ ಸದಸ್ಯರದಾಗಿತ್ತು. ಕ್ಷೇತ್ರ ಮಟ್ಟದಲ್ಲಿ ಲಸಿಕಾ ತಂಡದ ಸದಸ್ಯರಾದ ಪಶುವೈದ್ಯಾಧಿಕಾರಿಗಳು, ಹಿರಿಯ ಪಶುವೈದ್ಯಾಧಿಕಾರಿಗಳು, ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ), ಜಾನುವಾರು ಅಭಿವೃದ್ಧಿ ಅಧಿಕಾರಿಗಳು, ಜಾನುವಾರು ಅಧಿಕಾರಿಗಳು, ಹಿರಿಯ ಪಶುವೈದ್ಯಕೀಯ ಪರೀಕ್ಷಕರು, ಪಶುವೈದ್ಯಕೀಯ ಪರೀಕ್ಷಕರು, ಕಿರಿಯ ಪಶುವೈದ್ಯಕೀಯ ಪರೀಕ್ಷಕರು, ಪಶುಸಖಿಯರು, ಮೈತ್ರಿ ಕಾರ್ಯಕರ್ತರು ತರಬೇತಿ ಪಡೆದ ‘ಡಿ’ ದರ್ಜೆ ನೌಕರರು, ವಾಹನ ಚಾಲಕರುಗಳನ್ನು, 45 ದಿನಗಳ ಕಾಲ ನಿರಂತರವಾಗಿ ಪ್ರೇರೇಪಿಸಿ, ಪ್ರೋತ್ಸಾಹಿಸಿ ದಿನಾಂಕ: 06.06.2026ರಂದು ತಮ್ಮ ಜಿಲ್ಲೆಯ ಗುರಿ 4,58,870 ಅನುಗುಣವಾಗಿ 4,61,748 ರಾಸುಗಳಿಗೆ ಲಸಿಕೆ ಹಾಕಿ ಶೇಕಡ 100.63 ಪ್ರಗತಿ ಸಾಧಿಸಿರುತ್ತೀರಿ. ಶೇಕಡ 100 ಗುರಿ ಸಾಧಿಸಿದ ಮೊದಲ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರರಾದ ತಮ್ಮೆಲ್ಲರಿಗೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ ಎಂದು ಸಿಇಒ ಅವರು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


