ಸಿಂಹಗಳಿಗೆ ನಾಮಕರಣ ಮಾಡಿ ವಿವಾದಕ್ಕೆ ಕಾರಣವಾದ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯ ಸಫಾರಿ ಪಾರ್ಕ್ ನಲ್ಲಿ ನಡೆದಿದೆ. ಇತ್ತೀಚೆಗೆ ಸಫಾರಿ ಪಾರ್ಕ್ ಗೆ ಒಡಿಶಾದಿಂದ ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು ಸಿಂಹಗಳನ್ನು ತರಲಾಗಿತ್ತು. ಅವುಗಳಲ್ಲಿ ಹೆಣ್ಣು ಸಿಂಹಕ್ಕೆ ʼಸೀತಾʼ ಮತ್ತು ಗಂಡು ಸಿಂಹಕ್ಕೆ ʼಅಕ್ಬರ್ʼ ಎಂದು ನಾಮಕರಣ ಮಾಡಿರುವುದು ಬಯಲಾಗಿದೆ.
ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷದ್ (VHP) ಮುಖಂಡರು ಭಾರಿ ವಿರೊಧ ವ್ಯಕ್ತಪಡಿಸಿದ್ದಾರೆ. ಅರಣ್ಯಾಧಿಕಾರಿಗಳು ಹೆಣ್ಣು ಸಿಂಹಕ್ಕೆ ‘ಸೀತಾ’ ಹಾಗೂ ಗಂಡು ಸಿಂಹಕ್ಕೆ ‘ಅಕ್ಬರ್’ ಎಂದು ನಾಮಕರಣ ಮಾಡಿದ್ದಾರೆ. ಜೊತೆಗೆ ಅದನ್ನು ಸಫಾರಿ ವಲಯದಲ್ಲಿ ಒಂದೇ ಪ್ರದೇಶದೊಳಗೆ ಇರಿಸಿದ್ದಾರೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಕೂಡಲೇ ಪ್ರಾಣಿಗಳ ಹೆಸರು ಬದಲಿಸಬೇಕು. ಸಿಂಹಗಳನ್ನು ಬೇರೆ ಬೇರೆ ಕಡೆ ಇಡಬೇಕು ಎಂದು ಆಗ್ರಹಿಸಿ ವಿಹೆಚ್ ಪಿ ನಾಯಕರು ಕೋಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿ ಫೆ.20ರಂದು ವಿಚಾರಣೆಗೆ ಬರಲಿದೆ.
ಸಿಂಹಗಳನ್ನು ಇತ್ತೀಚೆಗೆ ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ನಿಂದ ಸ್ಥಳಾಂತರಿಸಲಾಗಿದೆ ಮತ್ತು ಫೆಬ್ರವರಿ 13 ರಂದು ಸಫಾರಿ ಪಾರ್ಕ್‌ಗೆ ಬಂದ ನಂತರ ಮರುನಾಮಕರಣ ಮಾಡಲಾಗಿಲ್ಲ ಎಂದು ವಿವಾದದ ಕುರಿತು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ ಎಂದು ವರದಿ ತಿಳಿಸಿದೆ.


