ಲೋಕಾಯುಕ್ತ ಅಧಿಕಾರಿಗಳೆಂದು ಕರೆ ಮಾಡಿ, ಸದ್ಯದಲ್ಲೇ ತಮ್ಮ ವಿರುದ್ಧ ಎಫ್ ಐಆರ್ ದಾಖಲಾಗಲಿದೆ ಎಂದು ಮಹಿಳಾ ಅಧಿಕಾರಿಗೆ ಬೆದರಿಕೆಯೊಡ್ಡಲಾಗಿದೆ. ಅವರಿಂದ 1 ಲಕ್ಷ ರೂ. ಹಣ ಪಡೆದು ವಂಚಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ವೇಳೆ ಮಹಿಳೆಗೆ ಕರೆ ಮಾಡಿ ಬೆದರಿಸಲಾಗಿದೆ.
ಆಹಾರ ಇಲಾಖೆಯಲ್ಲಿ ಶಿರಸ್ತೇದಾರ್ ಆಗಿರುವ ಮಹಿಳಾ ಅಧಿಕಾರಿಯೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಗೆ ಆಗಮಿಸಿದ್ದರು. ಈ ಸಂದರ್ಭ ವಾಟ್ಸಪ್ ನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಲೋಕಾಯುಕ್ತ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. ‘ತಮ್ಮ ವಿರುದ್ಧ ದೂರು ಬಂದಿದೆ. ಇನ್ನು ಕೆಲವೇ ನಿಮಿಷದಲ್ಲಿ ಎಫ್ ಐಆರ್ ದಾಖಲು ಮಾಡಲಾಗುತ್ತದೆ. ಇದನ್ನು ತಪ್ಪಿಸಬೇಕಿದ್ದರೆ ಒಂದೂವರೆ ಲಕ್ಷ ರೂ. ನೀಡಬೇಕುʼ ಎಂದು ಬೆದರಿಸಿದ್ದ. ಯಾವ ದೂರು ಎಂದು ಕೇಳಿದರೂ ವಿವರಣೆ ನೀಡಿರಲಿಲ್ಲ.
ಹೆದರಿದ ಮಹಿಳಾ ಅಧಿಕಾರಿ ಲೋಕಾಯುಕ್ತ ಎಂದು ಕರೆ ಮಾಡಿದ್ದ ವ್ಯಕ್ತಿ ಸೂಚಿಸಿದ್ದ ಅಕೌಂಟ್ ನಂಬರ್ ಗಳಿಗೆ ಒಂದು ಲಕ್ಷ ರೂ. ಹಣ ವರ್ಗಾಯಿಸಿದ್ದರು. ಬಳಿಕ ಪರಿಶೀಲಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.


