ತುಮಕೂರು: ಇಂದಿನ ಜೀವನಶೈಲಿಯಲ್ಲಿ ಮೊಬೈಲ್, ಕಂಪ್ಯೂಟರ್ ಹಾಗೂ ಟಿವಿಯಂತಹ ಡಿಜಿಟಲ್ ಸಾಧನಗಳ ಬಳಕೆ ಹೆಚ್ಚಾಗಿದ್ದು, ಇದರಿಂದ ಕಣ್ಣಿನ ಆಯಾಸ, ದೃಷ್ಟಿ ಮಂದವಾಗುವುದು, ತಲೆನೋವು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಆದರೆ ಕಣ್ಣಿನ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಡಾ. ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ಅಂಟೋನಿ ಅನಿಲ್ ಹೇಳಿದರು.
ತುಮಕೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಎಸ್ಟೇಟ್ ವಿಭಾಗದ ವತಿಯಿಂದ, ತುಮಕೂರಿನ ಡಾ. ಅಗರ್ ವಾಲ್ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ವಿದ್ಯಾನಿಲಯದ ಹೊರಗುತ್ತಿಗೆ ನೌಕರರಿಗಾಗಿ ಶುಕ್ರವಾರ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಣ್ಣಿನಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡಾಗ ಮಾತ್ರ ವೈದ್ಯರನ್ನು ಸಂಪರ್ಕಿಸುವ ಬದಲು ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ವಿಶೇಷವಾಗಿ ಮಕ್ಕಳು, ವಯೋವೃದ್ಧರು, ಹೆಚ್ಚು ಸಮಯ ಕಂಪ್ಯೂಟರ್ ಅಥವಾ ಮೊಬೈಲ್ ಬಳಸುವವರು ಹಾಗೂ ಮಧುಮೇಹದಂತಹ ಕಾಯಿಲೆ ಹೊಂದಿರುವವರು ನಿಯಮಿತವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಶ್ರೀನಿವಾಸ್ ಮಾತನಾಡಿ, ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಎಂದರೆ ನಮ್ಮ ಭವಿಷ್ಯವನ್ನು ಕಾಪಾಡಿಕೊಂಡಂತೆ. ಪ್ರತಿಯೊಬ್ಬರೂ ನಿಯಮಿತವಾಗಿ ನೇತ್ರ ತಪಾಸಣೆ ಮಾಡಿಸಿಕೊಂಡು ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿತ್ತು. ದಯಸ್ಪರ್ಶ ಆಸ್ಪತ್ರೆಯ ವ್ಯವಸ್ಥಾಪಕ ಅನಿಲ್ ಕುಮಾರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯೋಜಕ ಡಾ. ಸುದೀಪ್ ಕುಮಾರ್, ಎಸ್ಟೇಟ್ ಅಧಿಕಾರಿ ಮಂಜುನಾಥ್ ಹಾಗೂ ಉಪನ್ಯಾಸಕ ಡಾ. ವೇಣುಗೋಪಾಲ್ ಜಿ.ಎಸ್. ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
