ತುಮಕೂರು: ತಾಲ್ಲೂಕಿನ ಕಸಬಾ ಹೋಬಳಿ ಹಾಲನೂರು ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಮಲ್ಲೇಶ್ವರ ಸ್ವಾಮಿ, ಪಾರ್ವತಾದೇವಿ ಜಾತ್ರಾ ಮಹೋತ್ಸವ ಏ.8 ರಿಂದ ಏ.16ರವರೆಗೆ 9 ದಿನಗಳ ಕಾಲ ನಡೆಯಲಿದೆ.
ಜಿಲ್ಲಾಧಿಕಾರಿ ಶುಭ ಕಲ್ಯಾಣ್,ತಹಶೀಲ್ದಾರ್ ರಾಜೇಶ್ವರಿ,ಮುಜರಾಯಿ ಇಲಾಖೆ ಹಾಗೂ ಭಕ್ತಮಂಡಲಿ,ಹಾಲನೂರು ಗ್ರಾಮದ ಯಜಮಾನರು,ಗ್ರಾಮಸ್ಥರ ನೇತೃತ್ವದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವ ಏ.8 ರಂದು ಮಂಗಳವಾರ ಸಂಜೆ ಧ್ವಜಾರೋಹಣದೊಂದಿಗೆ ಚಾಲನೆಗೊಳ್ಳಲಿದೆ.
ಏ.9 ರಂದು ಗ್ರಾಮದ ಎಲ್ಲಾ ಮನೆಗಳಿಂದ ಆರತಿಗಳು ಬರಲಿವೆ.ನಂತರ ಗಿರಿಜಾ ಕಲ್ಯಾಣ ನಡೆಯಲಿದೆ. ಏ.10 ತ್ರಯೋದಶಿ ಗುರುವಾರ ಮಧ್ಯಾಹ್ನ 12:45 ಕ್ಕೆ ಬ್ರಹ್ಮ ರಥೋತ್ಸವ ನಡೆಯಲಿದೆ.ಬೆಳ್ಳಾವಿ ಮಠದ ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.ಏ.11 ರಂದು ಸಂಜೆ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಅದಲಾಪುರ ಮಹಾಲಕ್ಷ್ಮೀ ದೇವಿ ಮೆರವಣಿಗೆ ನೆರವೇರಲಿದೆ.ರಂಗೋಲಿ ಸ್ಪರ್ಧೆ ಸಹ ಏರ್ಪಡಿಸಲಾಗಿದೆ.
ಏ.12 ರಂದು ಹುಣ್ಣಿಮೆ ಶನಿವಾರದಂದು ಜಾತ್ರೆಯ ಮುಖ್ಯ ಆಕರ್ಷಣೆ ಉಪ್ಪರಿಗೆ ವಾಹನ ಉತ್ಸವ ನಡೆಯಲಿದ್ದು,ಅಂದು ರಾತ್ರಿ ಶ್ರೀ ಮಲ್ಲೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಕುರುಕ್ಷೇತ್ರ ನಾಟಕ ಪ್ರದರ್ಶನವಾಗಲಿದೆ. ಏ.13 ರಂದು ರುದ್ರಾಕ್ಷಿ ಮಂಟಪ ಮೆರವಣಿಗೆ ಏ.16 ರಂದು ವಸಂತೋತ್ಸವ ಓಕುಳಿ ಆಚರಣೆ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಜಾತ್ರೆ ನಡೆಯುವ 9 ದಿನವೂ ನಿರಂತರವಾಗಿ ಅನ್ನ ದಾಸೋಹ ನಡೆಯಲಿದೆ.ಮುಜರಾಯಿ ಇಲಾಖೆ ನೇತೃತ್ವದಲ್ಲಿ ನಡೆಯುವ ಸದರಿ ಜಾತ್ರಾ ಮಹೋತ್ಸವದ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಇರುತ್ತದೆ.
ರಥ ಬೀದಿಯಲ್ಲಿ ನೂರಾರು ಅಂಗಡಿ ಮುಂಗಟ್ಟು ತೆರೆದು ಕೊಳ್ಳಲಿವೆ.ಸಹಸ್ರಾರು ಭಕ್ತಾದಿಗಳು ಭಾಗವಹಿಸಲಿದ್ದಾರೆ.ಪ್ರಮುಖವಾಗಿ ಹರಕೆ ಮಾಡಿಕೊಂಡವರು ಹಾಗೂ ಹರಕೆ ಮಾಡಿಕೊಳ್ಳುವವರು ಕುಟುಂಬ ಸಮೇತರಾಗಿ ಆಗಮಿಸಿ ಹರಕೆ ತೀರಿಸಲಿದ್ದಾರೆ. ಸಂತಾನ,ಆರೋಗ್ಯ, ವಿದ್ಯೆ, ಲಗ್ನ ಇತ್ಯಾದಿಗಳ ಈಡೇರಿಕೆಗೆ ಭಕ್ತರು ಹರಕೆ ಹೊತ್ತಿರುತ್ತಾರೆ. ಹರಕೆ ಈಡೇರಿದ ಮೇಲೆ ಹರಕೆ ತೀರಿಸುತ್ತಾರೆ. ಹಾಗೆಯೇ ಜಾತ್ರೆಗೆ ಬರುವ ಭಕ್ತಾದಿಗಳು ಹಾಲನೂರು ಸುತ್ತಮುತ್ತಲಿನ ಪುರಾಣ ಪ್ರಸಿದ್ಧ ದೇವಾಲಯಗಳಾದ ಅರೆಯೂರು ವೈದ್ಯನಾಥೇಶ್ವರ, ಕೈದಾಳ ಚನ್ನಕೇಶವ, ಗೂಳೂರು ಗಣೇಶ, ಹೆತ್ತೇನಹಳ್ಳಿ ಮಾರಮ್ಮನ ಶ್ರೀ ಕ್ಷೇತ್ರಗಳಿಗೆ ಭೇಟಿ ನೀಡಬಹುದಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4