ಕಣ್ಣೂರ್ ಜಿಲ್ಲೆಯ ಪಯ್ಯನೂರು ಬಳಿಯ ಮಡಾಯಿ ಎಂಬಲ್ಲಿ ನೆಲೆಸಿರುವ ಮಡಾಯಿ ಕಾವು ದೇವಸ್ಥಾನ ಎಂದು ಪ್ರಸಿದ್ಧವಾಗಿರುವ ಶ್ರೀ ತಿರುವರ್ಕ್ಕಟ್ಟು ಕಾವು ಭಗವತಿ ದೇವಸ್ಥಾನವು ಭಕ್ತರಿಗೆ ಕೋಳಿಯಿಂದ ಮಾಡಿದ ತಿನಿಸುಗಳನ್ನು ‘ಪ್ರಸಾದ’ವಾಗಿ ನೀಡುತ್ತದೆ.
ಕನ್ನಡಿಗರು ಹೆಚ್ಚಾಗಿ ಹೋಗುವ ಈ ದೇವಾಲಯದಲ್ಲಿ ಕೋಳಿ ತಿಂಡಿಯೇ ಪ್ರಸಾದ. ಈ ಪ್ರದೇಶದಲ್ಲಿ ಕನಿಷ್ಠ ಮೂರು ದೇವಾಲಯಗಳು ಕೋಳಿಯನ್ನು ‘ಪ್ರಸಾದ’ವಾಗಿ ವಿತರಿಸುತ್ತವೆ. “ಈ ಹಿಂದೆ ದೇವಾಲಯದಲ್ಲಿ ಪ್ರಾಣಿ ಬಲಿ ನೀಡಲಾಗುತ್ತಿತ್ತು. ಪ್ರಾಣಿ ಬಲಿ ನಿಷೇಧದ ಬಳಿಕ ಈ ಪದ್ಧತಿ ಸ್ಥಗಿತ. ಆದರೆ ಇಂದಿಗೂ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯವಾಗಿ ಕೋಳಿ ಮಾಂಸವನ್ನು ಬೇಯಿಸಲಾಗುತ್ತದೆ. ಅದನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ.
ದೇವಾಲಯದ ಒಳಗೆ ಕೋಳಿ ಮಾಂಸವನ್ನು ಸ್ವತಃ ಅರ್ಚಕರು ದೇವರಿಗೆ ನೈವೇದ್ಯವಾಗಿ ಬೇಯಿಸುತ್ತಾರೆ. ಇದನ್ನು ಬೇಯಿಸಿದ ಹೆಸರುಕಾಳಿನೊಂದಿಗೆ ಭಕ್ತರಿಗೆ ವಿತರಿಸಲಾಗುತ್ತದೆ.
ಮಡಾಯಿ ದೇವಸ್ಥಾನಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಭಕ್ತರು. 2016ರಲ್ಲಿ ಕೊನೆಯ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಬಿಎಸ್ ಯಡಿಯೂರಪ್ಪ, ಈ ದೇವಸ್ಥಾನಕ್ಕೆ ಭೋಜನಶಾಲೆ ಕೊಡುಗೆ ನೀಡಿದ್ದಾರೆ. ಹಲವು ಗಣ್ಯರು, ರಾಜಕಾರಣಿಗಳಲ್ಲದೆ ಬಿಜೆಪಿ ರಾಜ್ಯ ನಾಯಕರು ಕೂಡ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಹಿಂದೂಗಳ ಪವಿತ್ರ ಮಾಸದಲ್ಲಿ ಮಾಂಸಾಹಾರ ಸೇವಿಸುವ ಮೂಲಕ ಕೆಲವು ವಿರೋಧ ಪಕ್ಷದ ನಾಯಕರು ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದರು.
ಮೋದಿಯವರ ಹೇಳಿಕೆಯ ಗದ್ದಲದ ನಂತರ ಇತ್ತೀಚಿನ ದಿನಗಳಲ್ಲಿ ಕೋಳಿಯನ್ನು ‘ಪ್ರಸಾದ’ವಾಗಿ ನೀಡುವ ದೇವಾಲಯದ ಸಂಪ್ರದಾಯ ಹೆಚ್ಚು ಗಮನ ಸೆಳೆಯುತ್ತಿದೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಕೂಡ ಮೋದಿ ಅವರನ್ನು ದೇವಸ್ಥಾನಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ.
ರಾಜಕೀಯ ಕಾರಣಕ್ಕಾಗಿ ದೇವಾಲಯ ಸದ್ದಾಗುತ್ತಿದ್ದು, ದೇವಾಲಯದ ಅರ್ಚಕರು ಆತಂಕಗೊಂಡಿದ್ದಾರೆ. ರಾಜಕೀಯ ಬೆಳವಣಿಗೆಗಳ ಕಾರಣದಿಂದ, ಅನಾದಿ ಕಾಲದಿಂದಲೂ ಅನುಸರಿಸುತ್ತಿರುವ ಆಚರಣೆಗೆ ಏನಾದರೂ ಕಡಿವಾಣ ಬೀಳ ಬಹುದೇ ಎಂಬ ಆತಂಕ ಅರ್ಚಕರದ್ದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296