ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ಅಂಬಾರಪುರ ಗ್ರಾಮದ ಸ.ನಂ.46ರ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ಅವರು ಏಪ್ರಿಲ್ 7ರ ಬೆಳಿಗ್ಗೆ 11 ಗಂಟೆಗೆ ವಿಚಾರಣೆ ನಡೆಸಲಿದ್ದಾರೆ.
ವಿಚಾರಣೆಯನ್ನು ಅಂಬಾರಪುರ ಗ್ರಾಮದ ಸ.ನಂ.46ರ ಜಮೀನಿನಲ್ಲಿರುವ ಕುಮಾರ ನಾಯ್ಕ ಅವರ ಮನೆಯ ಬಳಿ ನಡೆಸಲಿದ್ದಾರೆ. ವಿಚಾರಣೆಗೆ ಸಂಬಂಧಪಟ್ಟ ಖಾತೆದಾರರು/ಮಂಜೂರಿ (ಮರಣ ಹೊಂದಿರುವ ಪ್ರಕರಣಗಳಲ್ಲಿ ಆಯಾ ವಾರಸುದಾರರು ಕಡ್ಡಾಯವಾಗಿ ಮರಣ ಪ್ರಮಾಣ ಪತ್ರ, ವಂಶವೃಕ್ಷ, ಗುರುತಿನ ಚೀಟಿ, ಇತರೆ ದಾಖಲೆಗಳನ್ನು ಹಾಜರುಪಡಿಸುವುದು)ದಾರರು ತಮ್ಮಲ್ಲಿರುವ ದೃಢೀಕೃತ ದಾಖಲೆಗಳೊಂದಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ತುರುವೇಕೆರೆ ತಾಲ್ಲೂಕು ಮಾವಿನಕೆರೆ ಗ್ರಾಮದ ಸಿದ್ದಲಿಂಗೇಗೌಡ ಅವರು ಅಂಬಾರಪುರ ಸ.ನಂ.46ರ ದುರಸ್ಥಿ ರದ್ದುಪಡಿಸುವ ಬಗ್ಗೆ ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದು, ಈಗಾಗಲೇ ವಿಚಾರಣೆ ನಡೆದು ಕರ್ನಾಟಕ ಲೋಕಾಯುಕ್ತ ವರದಿಯಂತೆ ಕೈಗೊಂಡ ಕ್ರಮದ ಬಗ್ಗೆ ಅಥವಾ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ವರದಿ ಸಲ್ಲಿಸಲು ಸೂಚಿಸಿರುವುದರಿಂದ ಈ ವಿಚಾರಣೆ ನಡೆಸಲಾಗುತ್ತಿದೆ.
ಅದೇ ರೀತಿ ರಾಜ್ಯದ ಘನ ಉಚ್ಚನ್ಯಾಯಾಲಯದಲ್ಲಿ ಅರಣ್ಯ/ತೋಟಗಾರಿಕೆ ಇಲಾಖೆಯ ಜಮಿನುಗಳಲ್ಲಿ ಮಂಜೂರಾಗಿರುವ ಮಂಜೂರಾತಿಯನ್ನು ರದ್ದುಪಡಿಸುವ ಬಗ್ಗೆ ಹೆಂಜಾರಪ್ಪ ಬಿನ್ ಸಿದ್ದಪ್ಪ ಮತ್ತು ಇತರೆ 8 ಜನರು ದಾಖಲಿಸಿರುವ ರಿಟ್ ಅರ್ಜಿ ಕುರಿತು ಕ್ರಮವಹಿಸಲು ನಿರ್ದೇಶನ ನೀಡಲಾಗಿದೆ. ಸದರಿ ಮಂಜೂರಾತಿಯನ್ನು ರದ್ದುಪಡಿಸುವ ಪೂರ್ವದಲ್ಲಿ ವಾದಿ/ಪ್ರತಿವಾದಿಗಳ ಅಹವಾಲು/ಲಿಖಿತ ಆಕ್ಷೇಪಣೆ /ದಾಖಲೆಗಳನ್ನು ಪಡೆದು ಪರಿಶೀಲಿಸಿ ಸೂಕ್ತ ಆದೇಶ ಹೊರಡಿಸಬೇಕಾಗುವ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆಸಲಾಗುತ್ತಿದೆ.
ಈ ವಿಚಾರಣೆಗೆ ಸಂಬಂಧಪಟ್ಟ ಖಾತೆದಾರರು/ಮಂಜೂರಿದಾರರು ಏಪ್ರಿಲ್ 7ರಂದು ನಡೆಯುವ ವಿಚಾರಣೆಗೆ ಗೈರುಹಾಜರಾದಲ್ಲಿ ಕಾನೂನು ರೀತ್ಯಾ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಯಬೇಕೆಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4