ತುಮಕೂರು: ಪಾಲಿಕೆ ವತಿಯಿಂದ ನಗರದ ಶಿರಾಗೇಟ್(ಕನಕವೃತ್ತ) ವೃತ್ತದಿಂದ ದಿಬ್ಬೂರು ವೃತ್ತದವರೆಗೆ ಸಂಪರ್ಕ ಕೂಡುವ ಐಡಿಎಸ್ ಎಂಟಿ 80 ಅಡಿ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದ್ದು, ಸಾರ್ವಜನಿಕರು ಸಹಕರಸಬೇಕೆಂದು ಪಾಲಿಕೆ ಆಯುಕ್ತ ಬಿ.ಅಶ್ವಿಜ ಮನವಿ ಮಾಡಿದ್ದಾರೆ.
ಕಳೆದ ವರ್ಷ ನಗರದ ಎಸ್.ಮಾಲ್ ಬಳಿ ಸೇತುವೆ ನಿರ್ಮಾಣ ಸಂದರ್ಭದಲ್ಲಿ ಭಾರಿ ವಾಹನಗಳ ದಟ್ಟಣೆಯಿಂದ ಶಿರಾಗೇಟ್(ಕನಕವೃತ್ತ) ವೃತ್ತದಿಂದ ದಿಬ್ಬೂರು ವೃತ್ತದವರೆಗೆ ಸಂಪರ್ಕ ಕೂಡುವ ಐಡಿಎಸ್ಎಂಟಿ 80 ಅಡಿ ರಸ್ತೆಯು ತುಂಬಾ ಹಾಳಾಗಿರುವ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ಈ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ–2ರ ಕ್ರಿಯಾ ಯೋಜನೆಯಡಿ ಅಭಿವೃದ್ಧಿಪಡಿಸಲು 14 ಕೋಟಿ ರೂ.ಗಳ ಅನುದಾನ ಮಂಜೂರಾಗಿದ್ದು, ಮಣ್ಣಿನ ಗುಣಮಟ್ಟವನ್ನು ಪರೀಕ್ಷಿಸಲು ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಮೂರನೇ ವ್ಯಕ್ತಿ ಪರೀಕ್ಷೆಗಾಗಿ ನೀಡಲಾಗಿದೆ.
ಸಂಚಾರ ಸುವ್ಯವಸ್ಥೆಗಾಗಿ ಶಿರಾಗೇಟ್(ಕನಕವೃತ್ತ) ವೃತ್ತದಿಂದ ದಿಬ್ಬೂರು ವೃತ್ತದವರೆಗೆ ಸಂಪರ್ಕ ಕೂಡುವ ಈ ರಸ್ತೆಯಲ್ಲಿ ಲಘು ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡುವ ಹಾಗೂ ಭಾರಿ ವಾಹನಗಳ ಸಂಚಾರವನ್ನು ತಡೆಗಟ್ಟುವ ಸಲುವಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗುವುದು. ಬ್ಯಾರಿಕೇಡ್ ಗಳನ್ನು ಶಿರಾಗೇಟ್ ವೃತ್ತದ ಎರಡು ರಸ್ತೆ ಹಾಗೂ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಎದುರು ಅಳವಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4