ತುಮಕೂರು: ಈಗಿನ ಕಾಲದ ಯುವ ಜನತೆಗೆ ಬಸವಣ್ಣನವರ ಸಮಗ್ರ ಚಿಂತನೆಗಳನ್ನು ತಲುಪಿಸುವ ಅಗತ್ಯ ಇದೆ. ಆದರ್ಶ ಜೀವನ ನಡೆಸುವುದಕ್ಕೆ ವಚನ ಸಾಹಿತ್ಯದ ಅರಿವು ಬಹಳ ಮುಖ್ಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಬಸವೇಶ್ವರ ಅಧ್ಯಯನ ಪೀಠ, ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗ ಬುಧವಾರ ಹಮ್ಮಿಕೊಂಡಿದ್ದ ‘ವಚನ ಗಾಯನ ಮತ್ತು ವ್ಯಾಖ್ಯಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತುಮಕೂರು ವಿವಿಯಲ್ಲಿ 16 ಅಧ್ಯಯನ ಪೀಠಗಳಿದ್ದು, ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳುವುದಕ್ಕೆ, ಸಾಮಾಜಿಕ, ಆರ್ಥಿಕ, ಕಲೆ, ಸಾಹಿತ್ಯ, ವಿಜ್ಞಾನ ಕ್ಷೇತ್ರಗಳ ಬಗ್ಗೆ ಹೆಚ್ಚಿನ ರೀತಿಯ ಅಧ್ಯಯನಗಳನ್ನು ಕೈಗೊಳ್ಳುವುದಕ್ಕೆ ವಿದ್ಯಾರ್ಥಿಗಳು ಈ ಪೀಠಗಳ ನೆರವು ಪಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್ ಎಂ.ಶೇಟ್ ಮಾತನಾಡಿ, ಸೂರ್ಯ ಚಂದ್ರ ಇರುವವರೆಗೂ ಬಸವಣ್ಣನವರ ವಚನಗಳು ಚಾಲ್ತಿಯಲ್ಲಿ ಇರುತ್ತವೆ. ಅವರು ರಚಿಸಿರುವ ವಚನಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲು ಅಪಾರ ಪರಿಶ್ರಮ ಹಾಗೂ ಸಮಯದ ಅವಶ್ಯಕತೆ ಇದೆ ಎಂದರು.
ಯುವಕರು ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿರುವ ಅಸಮಾನತೆ, ಜಾತಿ ತಾರತಮ್ಯಗಳ ನಿರ್ಮೂಲನೆಗೆ ಶ್ರಮಿಸಬೇಕು ಎಂದರು.
ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ, ಅಧ್ಯಯನ ಪೀಠದ ಪ್ರಮುಖ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಬಸವಣ್ಣನವರ ವಚನಗಳ ಪ್ರಚಾರ ಮತ್ತು ಪ್ರಸಾರ, ವಚನ ಸಾಹಿತ್ಯದ ಕುರಿತು ವಿಶೇಷ ಉಪನ್ಯಾಸ, ವಿಚಾರ ಸಂಕಿರಣ ಹಾಗೂ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವುದು, ವಚನ ಸಾಹಿತ್ಯದ ಅನನ್ಯತೆ ಹಾಗೂ ಪ್ರಸ್ತುತತೆಯನ್ನು ಈ ಕಾಲದ ಯುವ ಜನತೆಗೆ ತಲುಪಿಸುವ ಕಾರ್ಯಗಳನ್ನು ಪೀಠ ಮಾಡಲಿದೆ ಎಂದರು.
ಸಮಕಾಲಿನ ಸಾಂಸ್ಕೃತಿಕ ಸಂದರ್ಭದ ಅಗತ್ಯಗಳಾದ ಸೌಹಾರ್ದತೆ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪಸರಿಸುವುದಕ್ಕಾಗಿ ಬಸವಣ್ಣನವರ ಮತ್ತು ಇತರ ವಚನಕಾರರ ವಚನಗಳ ಕುರಿತ ಅರಿವನ್ನು ನಾಡಿನಾದ್ಯಂತ ಬೆಳಗಬೇಕಿದೆ ಎಂದರು.
ಪ್ರಸಿದ್ಧ ಹರಿಕಥಾ ವಿದ್ವಾಂಸ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣದಾಸ್ ಅವರು ವಚನಗಳ ಗಾಯನ ಹಾಗೂ ವ್ಯಾಖ್ಯಾನ ನಡೆಸಿಕೊಟ್ಟರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಟಿ.ಆರ್. ಲೀಲಾವತಿ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4