- ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ: ಇಂದಿನ ದುಬಾರಿ ದಿನಗಳಲ್ಲಿ ಹೋಟೆಲ್ ನಲ್ಲಿ ಒಂದು ಹೊತ್ತು ಹೊಟ್ಟೆತುಂಬಾ ಊಟ ಮಾಡಬೇಕಾದರೆ ಜೇಬಿನಲ್ಲಿ ನೂರಾರು ರೂಪಾಯಿ ಇರಬೇಕು. ಆದರೆ ಕೊರಟಗೆರೆ ಪಟ್ಟಣದಲ್ಲಿರುವ ಒಂದು ಹೋಟೆಲ್ ಮಾತ್ರ ಕಳೆದ 35–40 ವರ್ಷಗಳಿಂದ ಬಡವರ, ಮಧ್ಯಮ ವರ್ಗದವರ ಹಾಗೂ ವಿದ್ಯಾರ್ಥಿಗಳ ಹಸಿವನ್ನು ಅತ್ಯಂತ ಕಡಿಮೆ ಬೆಲೆಗೆ ನೀಗಿಸುತ್ತಾ ‘ಬಡವರ ಹೋಟೆಲ್’ ಎಂದೇ ಪ್ರಸಿದ್ಧಿ ಪಡೆದಿದೆ.
ಅದೇ ಕೊರಟಗೆರೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಮುಖ್ಯರಸ್ತೆಯ ಪಕ್ಕದಲ್ಲಿರುವ ‘ಶ್ರೀ ದುರ್ಗಾಪರಮೇಶ್ವರಿ ಸಸ್ಯಹಾರಿ ಹೋಟೆಲ್’. ಇದನ್ನು ಸ್ಥಳೀಯರು ಪ್ರೀತಿಯಿಂದ ‘ದತ್ತು ಹೋಟೆಲ್’ ಎಂದೇ ಕರೆಯುತ್ತಾರೆ.
ಕೊರಟಗೆರೆಯ ಜನರ ಮನಗೆದ್ದ ಕುಟುಂಬ:
ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಈ ಕುಟುಂಬ ಕೊರಟಗೆರೆಗೆ ಬಂದು ಸುಮಾರು 35-40 ವರ್ಷಗಳಾಗಿವೆ. ಮೊದಲು ದತ್ತು ಅವರ ತಂದೆಯವರಾದ ನಾಗಭೂಷಣ್ ರವರು ಈ ಹೋಟೆಲ್ ನಡೆಸಿಕೊಂಡು ಹೋಗುತ್ತಿದ್ದರು. ತದನಂತರ ಅವರ ಮಗ ದತ್ತಾತ್ರೇಯ (ದತ್ತು) ರವರು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ತಂದೆಯ ಹಾದಿಯಲ್ಲೇ ಹೋಟೆಲ್ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಸೌದೆ ಒಲೆಯ ಅಡುಗೆಯೇ ಇಲ್ಲಿನ ಸ್ಪೆಷಾಲಿಟಿ!
ಈ ಹೋಟೆಲ್‌ನ ಮತ್ತೊಂದು ವಿಶೇಷವೆಂದರೆ ಇಲ್ಲಿ ಇಂದಿಗೂ ಎಲ್ ಪಿಜಿ ಗ್ಯಾಸ್ ಬಳಸದೆ ಕೇವಲ ಸೌದೆ ಒಲೆಯನ್ನೇ ಅವಲಂಬಿಸಿ ಅಡುಗೆ ಮಾಡಲಾಗುತ್ತದೆ. ಸೌದೆ ಒಲೆಯಲ್ಲಿ ತಯಾರಾಗುವ ತಿಂಡಿ ಹಾಗೂ ಊಟ ಅತ್ಯಂತ ರುಚಿಕರವಾಗಿದ್ದು, ದೂರದ ಊರುಗಳಿಂದ ಬರುವ ಪ್ರಯಾಣಿಕರು ಇಲ್ಲಿನ ಸ್ವಾದಕ್ಕೆ ಮನಸೋತಿದ್ದಾರೆ. ಪ್ರತಿದಿನ ಬೆಳಗಿನ ಜಾವ 4 ಗಂಟೆಗೆ ಆರಂಭವಾಗುವ ಹೋಟೆಲ್ ವ್ಯವಹಾರ, ರಾತ್ರಿ 8:30 ರವರೆಗೆ ನಿರಂತರವಾಗಿ ನಡೆದುಕೊಂಡು ಹೋಗುತ್ತದೆ. ಹೋಟೆಲ್ ನಲ್ಲಿ ಸದ್ಯ 5 ರಿಂದ 6 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಇಲ್ಲಿ ಬೆಳಗಿನ ಸಮಯದಲ್ಲಿ ಟೀ, ಕಾಫಿ, ಇಡ್ಲಿ, ಚಟ್ನಿ, ಸಾಗು, ಪೂರಿ, ಬೋಂಡಾ, ಚಿತ್ರಾನ್ನ ಸಿಗುತ್ತದೆ. ಇದರೊಂದಿಗೆ ಪುಳಿಯೋಗರೆ, ಟೊಮೆಟೊಬಾತ್, ಪಲಾವ್ ಹಾಗೂ ಮೆಂತ್ಯಬಾತ್ ಸರದಿಯ ಮೇಲೆ ಲಭ್ಯವಿರುತ್ತವೆ. ಇನ್ನು ಮಧ್ಯಾಹ್ನದ ವೇಳೆ ಅನ್ನ–ಸಾಂಬಾರು, ಮೊಸರನ್ನ ದೊರೆಯುತ್ತದೆ.
ತಿಂಡಿ: ಒಂದು ಇಡ್ಲಿ, ಒಂದು ಬೋಂಡಾ ಹಾಗೂ ಅರ್ಧ ಪ್ಲೇಟ್ ರೈಸ್ ಗೆ ಕೇವಲ 40 ರೂ.
ಮಧ್ಯಾಹ್ನದ ಊಟ: ಅರ್ಧ ಮೊಸರನ್ನ, ಅರ್ಧ ಅನ್ನ–ಸಾಂಬಾರು, ಒಂದು ಹಪ್ಪಳ, ಉಪ್ಪಿನಕಾಯಿ ಹಾಗೂ ಒಂದು ಲೋಟ ಮಜ್ಜಿಗೆಗೆ ಕೇವಲ 40 ರೂ. ಮಾತ್ರ ಪಡೆಯಲಾಗುತ್ತದೆ.
ಹೋಟೆಲ್ ವ್ಯವಹಾರದ ಜೊತೆಗೆ ದತ್ತು ಅವರು ಹೈನುಗಾರಿಕೆಯನ್ನೂ ನಂಬಿಕೊಂಡಿದ್ದು, ಎಮ್ಮೆ, ಹಸು, ಕರು ಸೇರಿ ಒಟ್ಟು 10 ಜಾನುವಾರುಗಳನ್ನು ಸಾಕಿದ್ದಾರೆ. ಇವುಗಳ ಮೇವಿಗಾಗಿ ವರ್ಷಕ್ಕೆ 1 ಲಕ್ಷದಿಂದ 1.20 ಲಕ್ಷ ರೂಪಾಯಿವರೆಗೂ ಖರ್ಚು ಮಾಡುತ್ತಾರೆ.
ವಿದ್ಯಾರ್ಥಿಗಳಿಗೆ ರಿಯಾಯಿತಿ:
ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಬೆಳಗಿನ ತಿಂಡಿ ಸಮಯದಲ್ಲಿ ತಮ್ಮ ಬಾಕ್ಸ್ (ಊಟದ ಡಬ್ಬಿ) ತಂದುಕೊಟ್ಟರೆ ಸಾಕು, ಅದಕ್ಕೆ ಪ್ರೀತಿಯಿಂದ ತಿಂಡಿ ಹಾಕಿ ಕೊಡಲಾಗುತ್ತದೆ. ವಿಶೇಷವೆಂದರೆ, ವಿದ್ಯಾರ್ಥಿಗಳು ತಮ್ಮ ಕೈಲಾದಷ್ಟು ಕೊಟ್ಟ ಹಣವನ್ನಷ್ಟೇ ದತ್ತು ಸ್ವೀಕರಿಸುತ್ತಾರೆಯೇ ವಿನಃ ಇಷ್ಟೇ ಹಣ ಕೊಡಿ ಎಂದು ಎಂದೂ ಪಟ್ಟು ಹಿಡಿದವರಲ್ಲ.
— ರಂಗಶಾಮಯ್ಯ, ಕೊರಟಗೆರೆ ಪಟ್ಟಣ
ವೃದ್ಧರಿಗೆ, ಅಸಹಾಯಕರಿಗೆ ಉಚಿತ ಊಟ
ವಯೋವೃದ್ಧರು, ಅಸಹಾಯಕರು ಹಾಗೂ ಬುದ್ಧಿಮಾಂದ್ಯರು ಯಾರೇ ಆಗಲಿ ಹೋಟೆಲ್ ನ ಎದುರುಗಡೆ ಬಂದು ನಿಂತರೆ ಸಾಕು, ದತ್ತು ಅವರು ತಕ್ಷಣವೇ ಅವರಿಗೆ ತಿಂಡಿ, ಊಟ ಅಥವಾ ಕಾಫಿ–ಟೀ ನೀಡಿ ಸತ್ಕರಿಸುತ್ತಾರೆ. ಅವರಿಂದ ಒಂದು ರೂಪಾಯಿ ಹಣವನ್ನೂ ಪಡೆಯುವುದಿಲ್ಲ. ಅಲ್ಲದೆ ಪಕ್ಕದಲ್ಲೇ ಇರುವ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಿಂಡಿ ನೀಡುವುದರ ಜೊತೆಗೆ ಕುಡಿಯಲು ಬಿಸಿ ನೀರನ್ನು ಕಾಯಿಸಿಕೊಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
— ಮಂಜುನಾಥ್ ಕೆ.ಆರ್, ಕೊರಟಗೆರೆ ಟೌನ್
ಲಾಭಾಂಶದ ಬೆನ್ನಟ್ಟುವ ಇಂದಿನ ಜಗತ್ತಿನಲ್ಲಿ, ವ್ಯಾಪಾರದ ಜೊತೆಗೆ ಸೇವಾ ಮನೋಭಾವನೆಯನ್ನು ಉಳಿಸಿಕೊಂಡು ಬಂದಿರುವ ಕೊರಟಗೆರೆಯ ದತ್ತು ಹೋಟೆಲ್ ನಿಜಕ್ಕೂ ಶ್ಲಾಘನೀಯ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


