ತುರುವೇಕೆರೆ: ಇದು ತುರುವೇಕೆರೆಯ ತಾಲೂಕು ಕೇಂದ್ರದಲ್ಲಿರುವ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಅಧಿಕಾರಿಗಳು ನಿರ್ಲಕ್ಷತೆಯ ಕಥೆಯಾಗಿದೆ.
ನಿಲ್ದಾಣದ ಒಳಗೆ ಇರುವ ಶೌಚಾಲಯದ ಮತ್ತು ಕೈ ತೊಳೆಯುವ ಜಾಗದಲ್ಲಿ ಅಳವಡಿಸಿರುವ ಪ್ಲಾಸ್ಟಿಕ್ ಪೈಪು ಒಡೆದು ಹೋಗಿ, ಸುಮಾರು ತಿಂಗಳುಗಳೇ ಕಳೆದರೂ ಇದನ್ನು ಸರಿಪಡಿಸುವ ಗೋಜಿಗೆ ಕೆ ಎಸ್ ಆರ್ ಟಿ ಸಿ ಯ ನಿಲ್ದಾಣ ಅಧಿಕಾರಿಗಳು ಇನ್ನೂ ಹೋಗಿಲ್ಲ.
ಸಾರ್ವಜನಿಕರು ಈ ಬಗ್ಗೆ ಪ್ರಶ್ನೆ ಮಾಡಿದರೆ, “ಶೌಚಾಲಯವನ್ನು ಸ್ವಚ್ಛಗೊಳಿಸುವ ಕೆಲಸ ನಮ್ಮದಲ್ಲ. ನಿಗಮವು ಗುತ್ತಿಗೆ ನೀಡಿದೆ. ನೀವೇನಿದ್ದರೂ ಗುತ್ತಿಗೆದಾರರ ಬಳಿ ಕೇಳಿಕೊಳ್ಳಿ” ಎಂದು ಸಬೂಬು ಹೇಳಿ ನುಣುಚಿಕೊಳ್ಳುತ್ತಾರೆ. ಶೌಚಾಲಯದ ಕಾವಲುಗಾರನ್ನು ವಿಚಾರಿಸಿದರೆ “ಗುತ್ತಿಗೆದಾರರನ್ನು ವಿಚಾರಿಸಿಕೊಳ್ಳಿ” ಎಂದು ಹೇಳುತ್ತಾರೆ.
“ಇಲ್ಲಿ ದಿನನಿತ್ಯ ನೂರಾರು ಸಾರ್ವಜನಿಕರು ಪ್ರಯಾಣ ಮಾಡಲು ಈ ಬಸ್ ನಿಲ್ದಾಣಕ್ಕೆ ಬರುತ್ತಾರೆ. ಒಡೆದು ಹೋಗಿರುವ ಪೈಪ್ ನಿಂದ ಶೌಚಾಲಯದಲ್ಲಿ ಬಳಸಿದ ಮಲಿನವಾದ ನೀರು ವಾಪಸ್ ಪೈಪಿನ ಮೂಲಕ ಬರುತ್ತದೆ. ಕೆಲವರು ಕೈ ತೊಳೆದು ಮತ್ತು ಬಾಯಿಯಿಂದ ಉಗಿದ ಪಾನ್ ಬೀಡ, ಪಾನ್ ಮಸಾಲಗಳಂತಹ ಮಾದಕದ ಮಲಿನವಾದ ನೀರು ನಿಲ್ದಾಣದೊಳಗೆ ಬರುತ್ತದೆ. ಹರಿಯುವ ನೀರಿನಲ್ಲಿ ಪ್ರಯಾಣಿಸಲು ಬರುವ ವಯಸ್ಸಾದವರು ಈ ನೀರಿನಲ್ಲಿ ಜಾರಿ ಬಿದ್ದು ಕಾಲು ಕೈ ಮುರಿದುಕೊಂಡಂತಹ ಘಟನೆಗಳು ಕೂಡ ನಡೆದಿದೆ. ಅನೇಕ ಬಾರಿ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಬಾಣಸಂದ್ರ ಕೃಷ್ಣ ಮಾದಿಗ ಮಾಧ್ಯಮದ ಮುಂದೆ ಪ್ರಯಾಣಿಕರ ಅಳಲನ್ನು ತೋಡಿಕೊಂಡರು.
ಮತ್ತು ಬಸ್ ನಿಲ್ದಾಣದ ಪಕ್ಕದಲ್ಲಿಯೇ ತಿಪ್ಪೆಯನ್ನಾಗಿ ಮಾಡಿಸಿಕೊಂಡು, ಕಸ ಕಡ್ಡಿಗಳನ್ನು ಹಾಕುತ್ತಿದ್ದರು. ಪಟ್ಟಣ ಪಂಚಾಯಿತಿಯಿಂದ ಬರುವ ವಾಹನಗಳಿಗೆ ಇಲ್ಲಿನ ತ್ಯಾಜ್ಯವನ್ನು ಕೂಡಾ ಹಾಕುತ್ತಿಲ್ಲ.
ಕೆಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಪ್ರಯಾಣಿಕರ ಬಗ್ಗೆ ಮತ್ತು ಸ್ವಚ್ಛತೆಯ ಬಗ್ಗೆ ಇರುವ ನಿರ್ಲಕ್ಷತೆಯು ಎದ್ದು ಕಾಣುತ್ತಿದೆ. ಪ್ರತಿನಿತ್ಯ ಇಲ್ಲಿ ಓಡಾಡುವ ಪ್ರಯಾಣಿಕರು ಶಾಪ ಹಾಕುತ್ತಾ ಓಡಾಡುತ್ತಿದ್ದಾರೆ. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಈ ಬಗ್ಗೆ ಗಮನಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ವರದಿ: ಸುರೇಶ್ ಬಾಬು ಎಂ ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296