ಕುಣಿಗಲ್: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ಲಾಳಪುರದ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ (ಡಿವೈಡರ್) ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಬೆಂಗಳೂರಿನ ಜಯಮಾಲಾ (59) ಮತ್ತು ಅವರ ಮಗಳು ರಾಜೇಶ್ವರಿ (42) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮೂಲತಃ ರಾಯಚೂರಿನವರಾದ ಇವರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ರಾಜೇಶ್ವರಿ ಅವರ ಮಗ ಪ್ರೀತಮ್ ನನ್ನು ಶಾಲೆಗೆ ಸೇರಿಸುವ ಸಲುವಾಗಿ ಇವರು ಬೆಂಗಳೂರಿನಿಂದ ತುಮಕೂರಿಗೆ ರೈಲಿನಲ್ಲಿ ಬಂದಿದ್ದರು. ಅಲ್ಲಿಂದ ತಮ್ಮ ಸಂಬಂಧಿ ಮಹಾವೀರ ಅವರೊಂದಿಗೆ ಕಾರಿನಲ್ಲಿ ಶ್ರವಣಬೆಳಗೊಳಕ್ಕೆ ತೆರಳುತ್ತಿದ್ದರು. ಈ ವೇಳೆ ಲಾಳಪುರದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಪಲ್ಟಿಯಾಗಿದೆ.
ಅಪಘಾತದಲ್ಲಿ ಗಾಯಗೊಂಡಿರುವ ಮಹಾವೀರ ಮತ್ತು ಬಾಲಕ ಪ್ರೀತಮ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ತೀವ್ರತೆಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿಷಯ ತಿಳಿದ ತಕ್ಷಣ ಸಿಪಿಐ ಮಾದ್ಯಾ ನಾಯಕ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


