ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಕಣಿವೇನಹಳ್ಳಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ವೇಳೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ 7 ಗಂಟೆಯಲ್ಲಿ ನಡೆದಿದೆ.
ಗ್ರಾಮದ 40 ವರ್ಷದ ಹನುಮಂತರಾಯಪ್ಪ ಎಂಬವರು ಕಳೆದ ಐದು-–ಆರು ತಿಂಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಆತ್ಮಹತ್ಯೆಗೆ ಯತ್ನಿಸುವ ಘಟನೆಗಳು ಅತನಿಂದ ಹಲವು ಬಾರಿ ನಡೆದಿದೆ. ಈ ಹಿನ್ನೆಲೆ ಕುಟುಂಬಸ್ಥರು ಆತನು ಮನೆಯಿಂದ ಹೊರಗೆ ಹೋಗದಂತೆ ನೋಡಿಕೊಳ್ಳುತ್ತಿದ್ದರು. ಆದರೆ, ಶುಕ್ರವಾರ ಸಂಜೆ ಮನೆಯವರು ಗಮನಿಸದಿರುವ ಸಂದರ್ಭದಲ್ಲಿ ಹನುಮಂತರಾಯಪ್ಪ ಮನೆಯಿಂದ ತಪ್ಪಿಸಿಕೊಂಡು ಚಾಕುವನ್ನು ಕೈಯಲ್ಲಿ ಹಿಡಿದು ಗ್ರಾಮದ ಹೊರವಲಯದ ಮೆಕ್ಕೆಜೋಳ ತೋಟಕ್ಕೆ ತೆರಳಿದ್ದನು.
ಅಲ್ಲೆ ತನ್ನ ಕತ್ತನ್ನು ಚಾಕಿನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಗ್ರಾಮಸ್ಥರು ಅವನನ್ನು ಪತ್ತೆಹಚ್ಚಿ ತಕ್ಷಣ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ವೇಳೆ, ಮಾರ್ಗಮಧ್ಯದ ಮಡಕಶಿರಾ ಬಳಿ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಘಟನಾ ಸ್ಥಳಕ್ಕೆ ಪಾವಗಡ ಠಾಣೆಯ ಸಿಪಿಐ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4