ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ಕುಂಟರಾಮನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಯವರು ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಪಡಿತರ ಧಾನ್ಯಗಳನ್ನು 2021ರ ಅಕ್ಟೋಬರ್ 24ರಂದು ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದ್ದು, ವಶ ಪಡಿಸಿಕೊಂಡ ಪಡಿತರ ಧಾನ್ಯಗಳನ್ನು ಆಗಸ್ಟ್ 6ರಂದು ಬೆಳಿಗ್ಗೆ 11 ಗಂಟೆಗೆ ಗುಬ್ಬಿ ತಾಲ್ಲೂಕಿನ ಟಿ.ಎ.ಪಿ.ಸಿ.ಎಂ.ಎಸ್. ಸಗಟು ಮಳಿಗೆ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಗುಬ್ಬಿ ತಹಶೀಲ್ದಾರ್ ಆರತಿ ತಿಳಿಸಿದ್ದಾರೆ.
ತಹಶೀಲ್ದಾರ್ ಮತ್ತು ಆಹಾರ ನಿರೀಕ್ಷಕರ ತಂಡವು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 13.06 ಕ್ವಿಂಟಾಲ್ (21 ಪ್ಲಾಸ್ಟಿಕ್ ಚೀಲಗಳಲ್ಲಿರುವ) ರಾಗಿ ಹಾಗೂ ಅಕ್ಕಿ, ಗೋಧಿ ಸೇರಿದಂತೆ ವಿವಿಧ ಪಡಿತರ ಧಾನ್ಯಗಳನ್ನು ವಶಪಡಿಸಿಕೊಂಡು ಚೇಳೂರು ಪೊಲೀಸ್ ಠಾಣೆಯ ವಶಕ್ಕೆ ನೀಡಿ ಪ್ರಕರಣವನ್ನು ದಾಖಲಿಸಲಾಗಿತ್ತು. ಸದರಿ ದಾಸ್ತಾನನ್ನು ಗುಬ್ಬಿ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್. ಸಗಟು ಮಳಿಗೆಯಲ್ಲಿ ದಾಸ್ತಾನು ಮಾಡಲಾಗಿತ್ತು.
ಆಸಕ್ತರು ಅಗತ್ಯ ದಾಖಲೆ ಹಾಗೂ ಗುರುತಿನ ಚೀಟಿಯೊಂದಿಗೆ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದ ಬಿಡ್‌ದಾರರು ಶೇ.೫೦ರಷ್ಟು ಹಣವನ್ನು ಕಟ್ಟಬೇಕು. ಬಿಡ್ ದಿನ ಹೊರತುಪಡಿಸಿ ೩ ದಿನಗಳೊಳಗಾಗಿ ಉಳಿದ ಮೊತ್ತವನ್ನು ಪಾವತಿಸಿ ಪಡಿತರ ದಾಸ್ತಾನನ್ನು ಎತ್ತುವಳಿ ಮಾಡತಕ್ಕದ್ದು. ಇಲ್ಲವಾದಲ್ಲಿ ಶೇ.50ರಷ್ಟು ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296