ಚಿಕ್ಕನಾಯಕನಹಳ್ಳಿ: ಎಸ್ ಎಸ್ ಎಲ್ ಸಿಯಲ್ಲಿ ವಿದ್ಯಾರ್ಥಿಗಳು ಅಧಿಕ ಅಂಕಗಳನ್ನು ಪಡೆಯುವಂತೆ ಪ್ರೇರೇಪಿಸಿದ ಶಿಕ್ಷಕರನ್ನು ಗೌರವಿಸುವ ಸಲುವಾಗಿ ಮೇ 16 ರಂದು ಪಟ್ಟಣದಲ್ಲಿ ‘ನಮಗೆ ಪ್ರೇರಣೆ ನಮ್ಮ ಮೇಷ್ಟ್ರು’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಬಿ ಚಾರಿಟಬಲ್ ಟ್ರಸ್ಟ್ ಜ್ಞಾನಕಲ ಇವರ ವತಿಯಿಂದ ನಾಳೆ (ಮೇ 16) ಬೆಳಿಗ್ಗೆ 11 ಗಂಟೆಗೆ ಪಟ್ಟಣದ ತೀನಾಂಶ್ರೀ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಕಾರ್ಯಕ್ರಮದ ವಿಶೇಷವೆಂದರೆ, ಸಾಧನೆ ಮಾಡಿದ ವಿದ್ಯಾರ್ಥಿಗಳೇ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಲಿದ್ದಾರೆ. 2024-25ನೇ ಸಾಲಿನಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಹಂದನಕೆರೆಯ ವಿದ್ಯಾರ್ಥಿ ಕಿಶನ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 623 ಅಂಕ ಗಳಿಸಿದ ಸಿ.ಎನ್. ಹಳ್ಳಿ ಮೊರಾರ್ಜಿ ವಸತಿ ಶಾಲೆಯ ಯಶವಂತ್ ಕೆ. ಅಧ್ಯಕ್ಷತೆ ವಹಿಸಲಿದ್ದು, 620 ಅಂಕ ಪಡೆದ ಮಹಾಲಕ್ಷ್ಮಿ ಆಶಯ ನುಡಿಗಳನ್ನಾಡಲಿದ್ದಾರೆ.
ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಗಳಿಸಿದ 34 ವಿದ್ಯಾರ್ಥಿಗಳ ಮನೆಗೆ ತೆರಳಿ ಈಗಾಗಲೇ ಅಭಿನಂದಿಸಲಾಗಿದೆ. ಈ ಸಾಧನೆಗೆ ಕಾರಣರಾದ ವಿಷಯವಾರು ಒಟ್ಟು 72 ಶಿಕ್ಷಕರನ್ನು ಗುರುತಿಸಿ ಅವರಿಗೆ ಈ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಶಾಸಕರು ವಿವರಿಸಿದರು.
ನವಿಲೆ ಕೆರೆಗೆ ನೀರು ಬಿಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮುಂದಿನ ಜುಲೈ ತಿಂಗಳ ವೇಳೆಗೆ ನೀರು ಬಿಡುವ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಷ್ಟರೊಳಗೆ ಕಾಲುವೆಯಲ್ಲಿರುವ ಹೂಳು ತೆಗೆಯುವ ಕಾರ್ಯ ಮುಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ಕಾಂತರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗವಿರಂಗಯ್ಯ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಗಂಗಾಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


