ಶಿರಾ: ಕಿರಿದಾದ ಗುಂಡಿ ಬಿದ್ದ ರಸ್ತೆ ಆ ರಸ್ತೆಯ ಪಕ್ಕದಲ್ಲೊಂದು ಚರಂಡಿ ಗುಂಡಿ ಬಿಸಿಲಲ್ಲಿ ಧೂಳು ಮಿಶ್ರಿತ ರಸ್ತೆಯಲ್ಲಿ ಓಡಾಡುವುದು ಕಷ್ಟ, ಮಳೆ ಬಂದರೆ ಕೆಸರಲ್ಲಿ ಈಜಾಡಿ ಬೀಳುವುದು ಖಚಿತ ಇಂತಹ ಒಂದು ದುರಾವಸ್ಥೆಯ ರಸ್ತೆ ಕಂಡುಬರುವುದು ಶಿರಾ ತಾಲೂಕು ಬುಕ್ಕಾಪಟ್ಟಣ ಗ್ರಾಮದಲ್ಲಿ.
ಬುಕ್ಕಾಪಟ್ಟಣ–ಹಾಗಲವಾಡಿ ಮುಖ್ಯ ರಸ್ತೆಯಲ್ಲಿ ಕನ್ನಿಕಾ ಪರಮೇಶ್ವರಿ ದೇವಾಲಯದ ಮುಂಭಾಗದ ರಸ್ತೆ ಅದ್ವಾನದ ಗೂಡಾಗಿದೆ.
ರಸ್ತೆಯ ಪಕ್ಕದಲ್ಲಿರುವ ಚರಂಡಿಯನ್ನು ಖಾಸಗಿ ವ್ಯಕ್ತಿಯೊಬ್ಬ ಮನೆ ನಿರ್ಮಾಣದ ಸಂದರ್ಭದಲ್ಲಿ ಕಿತ್ತು ನಂತರ ಒಂದು ಕೇಸಿಂಗ್ ಪೈಪ್ ಹಾಕಿ ನೀರು ಹರಿಯುವಂತೆ ಮಾಡಿ ಮುಚ್ಚಲಾಗಿತ್ತು, ಊರಿನ ಜಾತ್ರೆಯ ಕಾರಣ ಚರಂಡಿಯಲ್ಲಿ ನೀರು ಹೆಚ್ಚಾಗಿ ಸರಾಗವಾಗಿ ಹರಿಯದ ಕಾರಣ ಪಂಚಾಯತಿ ಸಿಬ್ಬಂದಿ ಅದನ್ನು ಜೆಸಿಬಿ ಮೂಲಕ ಕಿತ್ತು ಹಾಕಿ ಹೊಸದಾಗಿ ಕಟ್ಟಡದ ಚರಂಡಿ ನಿರ್ಮಿಸುವಂತೆ ಖಾಸಗಿ ವ್ಯಕ್ತಿಗೆ ತಿಳಿಸಿದ್ದಾರೆ, ಆದರೆ ತಾನು ಈಗಾಗಲೇ ನಿರ್ಮಿಸಿದ ಚರಂಡಿಯನ್ನು ಪಂಚಾಯಿತಿ ಸಿಬ್ಬಂದಿ ಹಾಳು ಮಾಡಿದ್ದು ಅವರೇ ನಿರ್ಮಿಸಿ ಕೊಡಬೇಕೆಂದು ಖಾಸಗಿ ವ್ಯಕ್ತಿ ತಿಳಿಸಿದ್ದು ಪಂಚಾಯಿತಿ ಹಾಗೂ ಖಾಸಗಿ ವ್ಯಕ್ತಿಯ ಜಟಪಟಯಿಂದಾಗಿ ಸಾರ್ವಜನಿಕರು ಕಷ್ಟ ಅನುಭವಿಸುವಂತಾಗಿದೆ ತೆರೆದ ಚರಂಡಿಯಲ್ಲಿ ನೀರು ತುಂಬಿ ಸೊಳ್ಳೆಗಳ ಕಾಟ ಹಾಗೂ ಕೆಟ್ಟ ವಾಸನೆಯಿಂದ ಜನ ರೋಸಿ ಹೋಗಿದ್ದಾರೆ ಸದಾ ಜನನಿಬಿಡವಾಗಿರುವ ಈ ರಸ್ತೆಯಲ್ಲಿ ಯಾರಾದರೂ ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ರಾಜ್ಯ ಹೆದ್ದಾರಿಯಾಗಿದ್ದು ಗ್ರಾಮದ ಮುಖ್ಯ ರಸ್ತೆ ಕೂಡಾ ಆಗಿರುತ್ತದೆ. ಈಗಾಗಲೇ ಆ ರಸ್ತೆಯ ಎರಡೂ ಬದಿಯಲ್ಲಿದ್ದ ಪಾದಚಾರಿ ಮಾರ್ಗವನ್ನೂ ಕೂಡಾ ಅಂಗಡಿ ಮಾಲೀಕರು ಆಕ್ರಮಿಸಿಕೊಂಡಿರುತ್ತಾರೆ. ಪಂಚಾಯಿತಿ ಆಡಳಿತ ಮಂಡಳಿಯಾಗಲಿ ಅಥವಾ PWD ಇಲಾಖೆಯ ಅಧಿಕಾರಿಗಳೇ ಆಗಲೀ ಯಾರೂ ಕೂಡಾ ಕನಿಷ್ಠ ಎಚ್ಚರಿಕೆಯನ್ನೂ ನೀಡಿಲ್ಲ. ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ. ಏನಾದರೂ ಅನಾಹುತ ಸಂಭವಿಸುವ ಮುನ್ನ ಕಠಿಣ ಕ್ರಮ ಜರುಗಿಸುವ ಅಗತ್ಯವಿದೆ.
ಆದ್ದರಿಂದ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಚರಂಡಿ ಕಾಮಗಾರಿ ಅತಿ ತುರ್ತಾಗಿ ಮುಗಿಸಿ ಜನರಿಗೆ ದುರ್ವಾಸನೆ ಹಾಗೂ ಸೊಳ್ಳೆಗಳಿಂದ ಮುಕ್ತಿ ಕೊಡಿಸಬೇಕಾಗಿ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296