ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರ ಹಿಂಬದಿಯ ವೀರಭದ್ರೇಶ್ವರ ದೇವಸ್ಥಾನ ಚೌಕಿ ಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಲಾಯಿತು. ನಂತರ ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಎಎ ಸರ್ಕಲ್, ನೆಹರೂ ರಸ್ತೆ ಮೂಲಕ ಗೋಪಿ ಸರ್ಕಲ್ ವರೆಗೆ ಮೆರವಣಿಗೆ ನಡೆಸಲಾಯಿತು. ಗೋಪಿ ಸರ್ಕಲ್ ನಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.
ಪಂಚಮಸಾಲಿ ಲಿಂಗಾಯತ ಸಮುದಾಯದ ಉಳಿವಿಗಾಗಿ ಹೋರಾಟ ನಡೆಸಲಾಗುತ್ತಿದೆಯೇ ಹೊರತು ಮುಖ್ಯಮಂತ್ರಿ ಗದ್ದುಗೆ ಏರಲು ಅಲ್ಲ. ಮೀಸಲಾತಿ ಹೋರಾಟ ಕೈಬಿಡುವಂತೆ ಸಮುದಾಯದ ಶ್ರೀಗಳಿಗೆ ಒತ್ತಡ ಹೇರಲಾಗಿದೆ. ಕೆಲವರು ಹೋರಾಟವನ್ನು ಹತ್ತಿಕ್ಕಲು ಆಮಿಷ ಕೂಡ ಒಡ್ಡಿದ್ದಾರೆ. ಆದರೆ ಹೋರಾಟವನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ 2ಡಿ ಪ್ರವರ್ಗದಡಿ ಶೇ.4ರಷ್ಟು ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ವಿಧಾನಸಭಾ ಚುನಾವಣೆ ಹಿನ್ನಲೆ ಅದು ಅನುಷ್ಠಾನಕ್ಕೆ ಬಂದಿಲ್ಲ. ಶ್ರೀಗಳು ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸಲು ಕರೆ ನೀಡಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಡಿಕೆ ಈಡೇರಿಸಲು 15 ದಿನಗಳ ಕಾಲಾವಕಾಶ ಕೇಳಿದ್ದರು. 8 ತಿಂಗಳು ಕಳೆದರೂ ಸಮುದಾಯಕ್ಕೆ ಮೀಸಲಾತಿ ಮಾತ್ರ ಘೋಷಿಸಿಲ್ಲ ಎಂದು ಯತ್ನಾಳ್ ಹೇಳಿದರು.
ಹಲವು ಬಾರಿ ಹೋರಾಟ ಮಾಡಿದ್ದೇವೆ. ಮಠ ಬಿಟ್ಟು, ಸಮಾಜದ ಒಳಿತಿಗಾಗಿ ಹಳ್ಳಿಹಳ್ಳಿಗಳಿಗು ಸುತ್ತಿದ್ದೇನೆ. ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಜನ ಉತ್ತಮವಾಗಿ ಸ್ಪಂದಿಸಿದ್ದಾರೆ. ನಮ್ಮ ಹೋರಾಟ ಯಾರ ವಿರುದ್ದವು ಅಲ್ಲ. ಸಮುದಾಯಕ್ಕೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಮಾತ್ರ. ಭರವಸೆ ನೀಡಿದವರು ಮರೆತಿದ್ದಾರೆ. ಅವರನ್ನು ಎಚ್ಚರಿಸುವ ಕಾರ್ಯ ಮುಂದುವರೆಸುತ್ತೇವೆ. ನ್ಯಾಯ ಸಿಗುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ.


