ತಿಪಟೂರು: ನಗರ ವ್ಯಾಪ್ತಿಯ 30ನೇ ವಾರ್ಡ್ ನ ಟಿ.ಎಲ್.ಪಾಳ್ಯದಲ್ಲಿ ತಲೆಮಾರುಗಳಿಂದ ವಾಸಿಸುತ್ತಿರುವ ನಾಗರಿಕರು ಸರಕಾರದಿಂದ ಹಕ್ಕು ಪತ್ರ ಸಿಗದೇ ಪರದಾಡುತ್ತಿರುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸುಮಾರು 120 ಮನೆಗಳಿರುವ ಟಿ.ಎಲ್.ಪಾಳ್ಯ ಗ್ರಾಮದಲ್ಲಿ ಸುಮಾರು 400 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ವಾಸಿಸುತ್ತಿದ್ದು, ಕೂಲಿ ನಾಲಿ ಮಾಡಿ ಪುಟ್ಟದೊಂದು ಸೂರು ಕನಸು ಕಂಡು ಕಟ್ಟಿರುವ ಮನೆಗಳಿಗೆ ನಗರ ಸಭೆ ವತಿಯಿಂದ ಮೂರು ನಾಲ್ಕು ವರ್ಷದಿಂದ ಎನ್ ಓ ಸಿ ನೀಡದೆ, ಮನೆಗಳಿಗೆ ವಿದ್ಯುತ್ ಸಂಪರ್ಕ ಕೂಡ ನೀಡಿಲ್ಲ. ಇದರಿಂದಾಗಿ ಶಾಲಾ– ಕಾಲೇಜು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಟಾರ್ಚ್ ಹಾಗೂ ಮೇಣದಬತ್ತಿ ಮೊರೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ .
ಇನ್ನು ಟಿ.ಎಲ್. ಪಾಳ್ಯದ ವಾಸಿಗಳಿಗೆ ಕುಡಿಯಲು ಶುದ್ಧ ನೀರು ಸಿಗದೆ ಅಕ್ಕ ಪಕ್ಕದಲ್ಲಿ ಇರುವ ಬಡಾವಣೆಗಳಿಂದ ನೀರು ತರಬೇಕಾಗಿದೆ. ನಗರಸಭೆ ವತಿಯಿಂದ ಕೊರೆಸಿರುವ ಕೊಳವೆ ಬಾವಿಯಿಂದ ಬಳಸಲು ಯೋಗ್ಯವಲ್ಲದ ನೀರು ಸರಬರಾಜು ಆಗುತ್ತಿದ್ದು, ಇದನ್ನೇ ಕುಡಿದು ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ವಾಸ ಮಾಡುತ್ತಿರುವ ಜನಸಾಮಾನ್ಯರು ಪಡಿತರ ಚೀಟಿ, ಮತದಾರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಹೊಂದಿದ್ದರು ಕೂಡ, ಹಲವಾರು ಸರಕಾರಿ ಸವಲತ್ತುಗಳನ್ನು ಪಡೆಯಲು ಆಗುತ್ತಿಲ್ಲವೆನ್ನುತ್ತಿದ್ದಾರೆ.
ಜೊತೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನೂರಾರು ವರ್ಷಗಳಿಂದ ವಾಸಿಸುತ್ತಿರುವ ನಮ್ಮ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸುವುದರ ಜೊತೆಗೆ ಈಗಾಗಲೇ ಕಟ್ಟಿರುವ ಮನೆಗಳಿಗೆ ಕೂಡಲೇ ಎನ್ ಓ ಸಿ ನೀಡಿ, ನಮ್ಮ ಬಾಳಲ್ಲಿ ಬೆಳಕಾಗಬೇಕೆಂದು ಈ ಭಾಗದ ಸ್ಥಳೀಯರ ಆಗ್ರಹ ವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296